Monday, December 1, 2025

ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಬ್ರೇಕ್​ಫಾಸ್ಟ್ ರಾಜಕೀಯ’: ‘ಕಾವೇರಿ’ ನಂತರ ಸದಾಶಿವನಗರಕ್ಕೆ ಸಿಎಂ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ತಿಕ್ಕಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆದ ‘ಬ್ರೇಕ್​ಫಾಸ್ಟ್ ಮೀಟಿಂಗ್’ ನಂತರ ಉಭಯ ನಾಯಕರು ಒಗ್ಗಟ್ಟಿನ ಸಂದೇಶ ರವಾನಿಸಿದ್ದರು. “ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ,” ಎಂದು ಸಿಎಂ ಮತ್ತು ಡಿಸಿಎಂ ಸ್ಪಷ್ಟಪಡಿಸಿದ್ದರು. ಈ ಸೌಹಾರ್ದಯುತ ಭೇಟಿಯ ಮುಂದುವರಿದ ಭಾಗವಾಗಿ, ಮಂಗಳವಾರ (ಡಿ 2) ಬೆಳಗ್ಗೆ 9:30ಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ಖಾಸಗಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತೊಂದು ‘ಬ್ರೇಕ್‌ಫಾಸ್ಟ್ ಮೀಟಿಂಗ್‌’ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸತತ ಭೇಟಿಗಳು ಕೇವಲ ರಾಜಕೀಯ ಶಿಷ್ಟಾಚಾರವೇ ಅಥವಾ ಇದರ ಹಿಂದೆ ಆಳವಾದ ರಾಜಕೀಯ ಒಳಮರ್ಮ ಅಡಗಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಅಧಿಕಾರ ಹಂಚಿಕೆ ಕುರಿತಂತೆ ಇರುವ ಬಿಕ್ಕಟ್ಟಿನ ಅಂತಿಮ ನಿರ್ಧಾರ ಈಗ ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದೆ. ಭಾನುವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಪರಿಸ್ಥಿತಿಗೆ ಸೂಕ್ತ ಪರಿಹಾರ ಸೂಚಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕದವರೇ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸೂಕ್ಷ್ಮ ವಿಷಯದಲ್ಲಿ ಯಾವುದೇ ‘ಏಕಪಕ್ಷೀಯ ಅಥವಾ ಪಕ್ಷಪಾತ’ ನಿರ್ಧಾರದ ಆಪಾದನೆಗೆ ಗುರಿಯಾಗದಂತೆ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರು ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್, ಎಐಸಿಸಿಯ ಇತರ ಹಿರಿಯ ನಾಯಕರು ಹಾಗೂ ಗಾಂಧಿ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಕರ್ನಾಟಕದ ಒಳ ಕಲಹ ತೀವ್ರಗೊಳ್ಳುವುದನ್ನು ತಡೆಯುವ ಉದ್ದೇಶದಿಂದ, ಪಕ್ಷದ ಎಲ್ಲ ಪ್ರಮುಖ ನಾಯಕರಿಂದ ‘ಪಾರದರ್ಶಕ ಮತ್ತು ಮುಕ್ತ ಅಭಿಪ್ರಾಯ ಸಂಗ್ರಹಣೆ’ ನಡೆಸುವ ಕಾರ್ಯವು ಪ್ರಗತಿಯಲ್ಲಿದೆ. ಈ ಮೂಲಕ, ಗಣನೀಯವಾಗಿ ಶಮನಗೊಂಡಿರುವ ಈ ಬಿಕ್ಕಟ್ಟಿಗೆ ಹೈಕಮಾಂಡ್ ಶೀಘ್ರದಲ್ಲೇ ಶಾಶ್ವತ ತೆರೆ ಎಳೆಯುವ ನಿರೀಕ್ಷೆಯಿದೆ.

error: Content is protected !!