BREAKING NEWS | ಚೆಂಬುವಿನಲ್ಲಿ ಮತ್ತೆ ಭೂಕಂಪ: ಶನಿವಾರ ಒಂದೇ ದಿನ ಎರಡು ಬಾರಿ ಕಂಪಿಸಿದ ಭೂಮಿ

ಹೊಸದಿಗಂತ ವರದಿ, ಮಡಿಕೇರಿ:

ಕಳೆದ ಒಂದು ವಾರದಿಂದ ಸತತವಾಗಿ ಭೂಕಂಪನಕ್ಕೆ ತುತ್ತಾಗಿರುವ ಕೊಡಗು-ದಕ್ಷಿಣಕನ್ನಡ ಜಿಲ್ಲೆಗಳ ಗಡಿಭಾಗವಾದ ಚೆಂಬು ಗ್ರಾಮದಲ್ಲಿ ಶನಿವಾರ ರಾತ್ರಿ ಮತ್ತೆ ಭೂ ಕಂಪಿಸಿದ ಅನುಭವವಾಗಿದೆ.
ಶನಿವಾರ ರಾತ್ರಿ 8.28ರ ಸುಮಾರಿಗೆ ಭೂಮಿ ನಡುಗಿದ್ದು, ಚೆಂಬು, ಸಂಪಾಜೆ, ಗೂನಡ್ಕ ಭಾಗದಲ್ಲಿ ಕಂಪನದ ಅನುಭವವಾಗಿರುವುದಾಗಿ ಹೇಳಲಾಗಿದೆ.
ಚೆಂಬು ವ್ಯಾಪ್ತಿಯಲ್ಲಿ ಜೂ.25ರ ಪೂರ್ವಾಹ್ನ 9ಗಂಟೆ ಸುಮಾರಿಗೆ ಮೊದಲ ಬಾರಿಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.3ರಷ್ಟು ತೀವ್ರತೆ ದಾಖಲಾಗಿತ್ತು.
ಬಳಿಕ ಜೂ.28ರಂದು ಸಂಜೆ 4.32ಕ್ಕೆ ಮತ್ತೆ ಭೂಕಂಪನವಾಗಿದ್ದು, ಇದರ ತೀವ್ರತೆ 1.8ರಷ್ಟಿತ್ತು. ಇದಾದ ಬಳಿಕ ಜು.1ರ ಬೆಳಗಿನ ಜಾವ 1.15ಗಂಟೆ ಮತ್ತೆ 1.8ರ ತೀವ್ರತೆಯಲ್ಲಿ ಅದೇ ಭಾಗದಲ್ಲಿ ಭೂಮಿ ಕಂಪಿಸಿದ್ದರೆ, ಅದೇ ದಿನ ಬೆಳಗ್ಗೆ 10.45ರ ಸುಮಾರಿಗೆ ಮತ್ತೆ ಭೂಮಿ ನಡುಗಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.5ರಷ್ಟು ದಾಖಲಾಗಿತ್ತು.
ಶನಿವಾರ ಮಧ್ಯಾಹ್ನ 1.22ರ ಸುಮಾರಿಗೆ ಸುಳ್ಯ ತಾಲೂಕಿನ ದೊಡ್ಡಕುಮೇರಿ ಬಳಿ ಮತ್ತೆ 1.8ರ ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಇದರ ಅನುಭವ ಕೊಡಗಿನ ಗಡಿ ಭಾಗದ ಗ್ರಾಮಗಳಲ್ಲೂ ಆಗಿತ್ತು. ಇದೀಗ ಶನಿವಾರ ರಾತ್ರಿ 8.28ರ ವೇಳೆಗೆ ಮತ್ತೆ ಕಂಪನದ ಅನುಭವವಾಗಿದ್ದು, ಇದರ ತೀವ್ರತೆಯ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!