ಹೊಸ ದಿಗಂತ ವರದಿ, ಹಾವೇರಿ:
ಶಿಗ್ಗಾವಿ ಶಹರದ ಆಸ್ತಿಯೊಂದರ ಉತಾರಗಳನ್ನು 1983 ರಿಂದ 2000 ನೇ ಇಸವಿಯವರೆಗೆ ಪೂರೈಸಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಡೆದಿದೆ.
ಶಿಗ್ಗಾವಿ ಪುರಸಭೆ ಕೇಸ್ ವರ್ಕರ್ ಸತೀಶ ತಳವಾರ ಬಂಧಿತ ವ್ಯಕ್ತಿ. ಶಿಗ್ಗಾವಿ ಪುರಸಭೆ ವ್ಯಾಪ್ತಿಯ ಮೌಲಾಲಿನಗರದ ದೂರುದಾರ ಅಬ್ದುಲ್ ರಶೀದ್ ತಂದೆ ಅಬ್ದುಲ್‌ಗಸಿ ದಿವಾನದಾರ ಸದರಿ ಉತಾರ ಪೂರೈಸಲು ಫೆ.19ರಂದು ಅರ್ಜಿ ಸಲ್ಲಿಸಿದ್ದರು. ಇದನ್ನು ನೀಡಲು 10 ಸಾವಿರ ಹಣಕ್ಕೆ ಬೇಡಿಕೆ ಇಟ್ಟು, ಗುರುವಾರ ಲಂಚದ ಹಣದ ಪೈಕಿ ದೂರುದಾರರಿಂದ ರೂ. 8ಸಾವಿರ ಪಡೆದುಕೊಳ್ಳುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು, ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ ಚಂದ್ರಶೇಖರ ನೇತೃತ್ವದಲ್ಲಿ ತನಿಖಾಧಿಕಾರಿ ಆಂಜನೇಯ ಎನ್ ಎಚ್. ಹಾಗೂ ಸಿಬ್ಬಂದಿ ಎಮ್ ಕೆ ನದಾಫ, ಎಮ್ ಕೆ ಲಕ್ಷ್ಮೀಶ್ವರ, ಆನಂದ ತಳಕಲ್ಲ, ಎಸ್.ಎನ್. ಕಡಕೋಳ, ಎಮ್. ಸಿ. ಅರಸೀಕೆರಿ, ಬಿ.ಎಸ್. ಸಂಕಣ್ಣನವರ, ಎ.ಜಿ. ಶೆಟ್ಟರ್, ರಮೇಶ ಗೆಜ್ಜೆಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸದರಿ ಆರೋಪಿತರನ್ನು ಶಿಗ್ಗಾಂವ ಶಹರದ ಪುರಸಭೆಯ ಕಚೇರಿಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.