ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ಜಗತ್ತಿನ ಕಣ್ಣು ಈಗ ಭಾರತದ ಕಡೆ ನೆಟ್ಟಿದ್ದು, ನಾಳೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಾಗತಿಕ ನಾಯಕರ ಐತಿಹಾಸಿಕ ಶೃಂಗಸಭೆ ಆರಂಭಗೊಳ್ಳುತ್ತಿದೆ. ವಿಶ್ವದ 11 ಪ್ರಮುಖ ದೇಶಗಳ ನಾಯಕರು ಒಂದೇ ಸೂರಿನಡಿ ಸೇರುತ್ತಿದ್ದು, ಭಾರತದ ಆತಿಥ್ಯದಲ್ಲಿ 18ನೇ ಬ್ರಿಕ್ಸ್ (BRICS) ಶೃಂಗಸಭೆ ಆಯೋಜನೆಯಾಗಿದೆ. ಈ ಮಹತ್ವದ ಸಭೆಯು ಅರ್ಥಪೂರ್ಣ ಚರ್ಚೆಗಳಿಗೆ ಸಾಕ್ಷಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ಮುಂದಿನ ದಿನಗಳಲ್ಲಿ ವಿಶ್ವದ ನಾಯಕರು ಬ್ರಿಕ್ಸ್ ಶೃಂಗಸಭೆಗಾಗಿ ಒಟ್ಟಿಗೆ ಸೇರಲಿದ್ದಾರೆ. ಜಾಗತಿಕ ಕಲ್ಯಾಣದ ಆಕಾಂಕ್ಷೆಗಳೊಂದಿಗೆ, ವಿವಿಧ ಅಂತಾರಾಷ್ಟ್ರೀಯ ವಿಷಯಗಳ ಕುರಿತು ಈ ಸಭೆಯಲ್ಲಿ ಮಹತ್ವದ ಸಂವಾದಗಳು ನಡೆಯಲಿವೆ ಎಂಬ ಪೂರ್ಣ ಭರವಸೆ ನನಗಿದೆ ಎಂದಿದ್ದಾರೆ.
ಈ ಸಭೆ ಪ್ರಮುಖ ವಿಷಯಗಳ ಕುರಿತು ಚರ್ಚೆ
ಪ್ರಸ್ತುತ ಇಡೀ ಜಗತ್ತು ರಷ್ಯಾ-ಉಕ್ರೇನ್ ಯುದ್ಧ, ಪಶ್ಚಿಮ ಏಷ್ಯಾದ ಬಿಕ್ಕಟ್ಟು ಹಾಗೂ ಅಮೆರಿಕದ ಟ್ರಂಪ್ ಸರ್ಕಾರದ ಕಠಿಣ ವ್ಯಾಪಾರ ನೀತಿಗಳಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತದ ‘ಭಾರತ್ ಮಂಟಪಂ’ ವೇದಿಕೆಯಲ್ಲಿ ನಡೆಯಲಿರುವ ಈ ಸಭೆಯು ಜಗತ್ತಿಗೆ ಹೊಸ ದಿಕ್ಸೂಚಿ ನೀಡಲಿದೆ. ಮುಖ್ಯವಾಗಿ ಜಾಗತಿಕ ಮಟ್ಟದಲ್ಲಿ ಆಹಾರ ಭದ್ರತೆ, ಇಂಧನ, ಆರೋಗ್ಯ, ವಿಪತ್ತು ನಿರ್ವಹಣೆ ಹಾಗೂ ಸರಬರಾಜು ಸರಪಳಿಯನ್ನು ಬಲಪಡಿಸುವತ್ತ ಈ ಎರಡು ದಿನಗಳ ಸಭೆ ಗಮನ ಹರಿಸಲಿದೆ.
ಇಂದು ಮೋದಿ- ಪುಟಿನ್ ಮಾತುಕತೆ
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇಂದೇ ತಮ್ಮ ಉನ್ನತ ಮಟ್ಟದ ನಿಯೋಗದೊಂದಿಗೆ ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. 2022ರಲ್ಲಿ ಉಕ್ರೇನ್ ಯುದ್ಧ ಆರಂಭವಾದ ನಂತರ ರಷ್ಯಾದಿಂದ ಹೊರಗೆ ಬ್ರಿಕ್ಸ್ ಶೃಂಗಸಭೆಯೊಂದರಲ್ಲಿ ಪುಟಿನ್ ಅವರು ಖುದ್ದಾಗಿ ಭಾಗವಹಿಸುತ್ತಿರುವುದು ಇದೇ ಮೊದಲು. ಇಂದು ಮಧ್ಯಾಹ್ನವೇ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ನಡುವೆ ಉಭಯ ದೇಶಗಳ ರಕ್ಷಣೆ, ಇಂಧನ, ತಂತ್ರಜ್ಞಾನ ಹಾಗೂ ವ್ಯಾಪಾರ ವೃದ್ಧಿಯ ಕುರಿತು ಅತ್ಯಂತ ಪ್ರಮುಖ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ.
ದೆಹಲಿಗೆ ಬರಲಿದ್ದಾರೆ ವಿಶ್ವದ ಬಿಗ್ ಲೀಡರ್ಸ್
ಭಾರತದ ಆತಿಥ್ಯದಲ್ಲಿ ನಡೆಯಲಿರುವ ಈ ಸಭೆಗೆ ಜಗತ್ತಿನ ಪ್ರಭಾವಿ ನಾಯಕರ ದಂಡೇ ಹರಿದು ಬರುತ್ತಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ, ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಹಾಗೂ ಅಬುಧಾಬಿಯ ಯುವರಾಜ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ.
ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು ಮಾತನಾಡಿ, ಚೀನಾ, ರಷ್ಯಾ, ಇರಾನ್‌ನಂತಹ ದೇಶಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ಜಾಗತಿಕ ಸಂಘರ್ಷಗಳನ್ನು ಕಡಿಮೆ ಮಾಡಲು ಮತ್ತು ವಿಶ್ವ ಮಟ್ಟದಲ್ಲಿ ಭಾರತದ ನಾಯಕತ್ವವನ್ನು ಪ್ರದರ್ಶಿಸಲು ಇದೊಂದು ಸುವರ್ಣ ಅವಕಾಶ ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
ರಾಜಧಾನಿಯಲ್ಲಿ ಹೈ ಅಲರ್ಟ್
ವಿಶ್ವದ ಅತಿ ಪ್ರಮುಖ ನಾಯಕರು ದೆಹಲಿಯಲ್ಲಿ ಬೀಡುಬಿಡುತ್ತಿರುವುದರಿಂದ ಇಡೀ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುಮಾರು 15,000 ದೆಹಲಿ ಪೊಲೀಸ್ ಸಿಬ್ಬಂದಿ ಹಾಗೂ 200 ಪ್ಯಾರಾಮಿಲಿಟರಿ ತುಕಡಿಗಳು ಭದ್ರತೆಗೆ ನಿಯೋಜನೆಗೊಂಡಿದ್ದು, ಇಡೀ ದೆಹಲಿ ಸಿಸಿಟಿವಿ ಕಣ್ಗಾವಲಿನಲ್ಲಿದೆ. ವಿವಿಐಪಿಗಳ ಸಂಚಾರದ ವೇಳೆ ಕೆಲವು ರಸ್ತೆಗಳಲ್ಲಿ ತಾತ್ಕಾಲಿಕ ಸಂಚಾರ ಮಾರ್ಪಾಡು ಇರಲಿದೆಯಾದರೂ, ಇಡೀ ದೆಹಲಿ ನಗರವನ್ನು ಬಂದ್ ಮಾಡಲಾಗುವುದಿಲ್ಲ ಎಂದು ಟ್ರಾಫಿಕ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.



