September 11, 2026
Friday, September 11, 2026
spot_img

ರೆಟ್ರೋ ಲುಕ್ ಕ್ರೇಜ್: ವಿಂಟೇಜ್ ಫೋಟೋ ಟ್ರೆಂಡ್ ಬೆನ್ನಲ್ಲೇ ಸೈಬರ್ ತಜ್ಞರು ನೀಡಿದ ಎಚ್ಚರಿಕೆ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಕೆಲವು ದಿನಗಳಿಂದ ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್ ಓಪನ್ ಮಾಡಿದರೆ ಸಾಕು, ಎಲ್ಲರ ಪ್ರೊಫೈಲ್‌ಗಳಲ್ಲೂ 80ರ ದಶಕದ ಹಳೆಯ ಸಿನಿಮಾಗಳ ಶೈಲಿಯ ಪೋಸ್ಟರ್‌ಗಳೇ ಕಾಣಿಸುತ್ತಿವೆ. ಹಳೆಯ ಕಾಲದ ಬೆಲ್ ಬಾಟಮ್ ಪ್ಯಾಂಟ್, ವಿಂಟೇಜ್ ಹೇರ್‌ಸ್ಟೈಲ್ ಮತ್ತು ಆ ಕ್ಲಾಸಿಕ್ ಬ್ಯಾಕ್‌ಗ್ರೌಂಡ್ ನೋಡಲು ನಿಜಕ್ಕೂ ಮಜಾ ಅನಿಸುತ್ತದೆ. AI ತಂತ್ರಜ್ಞಾನ ಬಳಸಿ ನಮ್ಮ ಇಂದಿನ ಫೋಟೋಗಳನ್ನು ಅಜ್ಜ-ಅಜ್ಜಿಯ ಕಾಲದ ಬ್ಲ್ಯಾಕ್ ಅಂಡ್ ವೈಟ್ ಅಥವಾ ರೆಟ್ರೋ ಲುಕ್‌ಗೆ ಬದಲಾಯಿಸಿಕೊಳ್ಳುವುದು ಈಗಿನ ದೊಡ್ಡ ಟ್ರೆಂಡ್ ಆಗ್ಬಿಟ್ಟಿದೆ.

ಆದರೆ, ಈ ಒಂದು ನಿಮಿಷದ ಮೋಜಿನ ಹಿಂದೆ ನಿಮ್ಮ ಇಡೀ ಜೀವನವನ್ನೇ ಸಂಕಷ್ಟಕ್ಕೆ ದೂಡುವ ದೊಡ್ಡ ಅಪಾಯ ಅಡಗಿದೆ ಎಂದರೆ ನೀವು ನಂಬುತ್ತೀರಾ? ಹೌದು, ಸದ್ಯ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿರುವ ಈ ’80s ಫೋಟೋ ವೈಬ್’ ಬಗ್ಗೆ ಸೈಬರ್ ಸುರಕ್ಷತಾ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.

ನಾವು ಮಾಡುತ್ತಿರುವ ದೊಡ್ಡ ತಪ್ಪು ಏನು?

ಈ ವಿಂಟೇಜ್ ಲುಕ್ ಪಡೆಯಲು ನಾವು ಮೊಬೈಲ್ ಆ್ಯಪ್‌ಗಳಿಗೆ ನಮ್ಮ ಗ್ಯಾಲರಿಯಲ್ಲಿರುವ ಒರಿಜಿನಲ್ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತೇವೆ. ಸೈಬರ್ ತಜ್ಞರ ಪ್ರಕಾರ, ಹೀಗೆ ಮಾಡುವುದರ ಮೂಲಕ ನಾವೇ ಖುದ್ದಾಗಿ ಸೈಬರ್ ಕಳ್ಳರ ಕೈಗೆ ನಮ್ಮ ಮುಖದ ಡಿಜಿಟಲ್ ಡೇಟಾವನ್ನು ತಟ್ಟೆಯಲ್ಲಿಟ್ಟು ಕೊಟ್ಟ ಹಾಗೆ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳಿಗೆ ನಿಮ್ಮ ಬ್ಯಾಂಕ್ ಖಾತೆ ಅಥವಾ ವೈಯಕ್ತಿಕ ವಿವರಗಳನ್ನು ಹ್ಯಾಕ್ ಮಾಡಲು ಇದೇ ದೊಡ್ಡ ಬಂಡವಾಳವಾಗಿದೆ.

ಯುವತಿಯರೇ ಹೆಚ್ಚು ಜಾಗರೂಕರಾಗಿರಿ

ಮುಖ್ಯವಾಗಿ ಯುವತಿಯರು ಇಂತಹ ಆ್ಯಪ್‌ಗಳನ್ನು ಬಳಸುವಾಗ ನೂರು ಬಾರಿ ಯೋಚಿಸಬೇಕು. ನೀವು ನೀಡುವ ಫೋಟೋಗಳನ್ನು ಬಳಸಿ, ‘ಡೀಪ್ ಫೇಕ್’ ತಂತ್ರಜ್ಞಾನದ ಮೂಲಕ ನಕಲಿ ಮತ್ತು ಅಶ್ಲೀಲ ಚಿತ್ರಗಳನ್ನು ಸೃಷ್ಟಿಸುವ ದೊಡ್ಡ ಜಾಲವೇ ಸಕ್ರಿಯವಾಗಿದೆ. ಅಷ್ಟೇ ಅಲ್ಲ, ಇಂಟರ್ನೆಟ್‌ನ ಕರಾಳ ಜಗತ್ತಾದ ‘ಡಾರ್ಕ್ ವೆಬ್’ನಲ್ಲಿ ನಿಮ್ಮ ಫೋಟೋಗಳನ್ನು ಕ್ರಿಮಿನಲ್ ಕೃತ್ಯಗಳಿಗಾಗಿ ಮಾರಾಟ ಮಾಡುವ ಸಾಧ್ಯತೆಯೂ ಹೆಚ್ಚಿರುತ್ತದೆ.

ಫೇಸ್ ಲಾಕ್ ಹ್ಯಾಕಿಂಗ್

ಇತ್ತೀಚಿನ ದಿನಗಳಲ್ಲಿ ನಮ್ಮ ಫೋನ್ ಅನ್ಲಾಕ್ ಮಾಡಲು, ಗೂಗಲ್ ಪೇ, ಫೋನ್ ಪೇ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಆ್ಯಪ್‌ಗಳನ್ನು ಓಪನ್ ಮಾಡಲು ನಾವು ‘ಫೇಸ್ ಲಾಕ್’ ಬಳಸುತ್ತೇವೆ. ಭವಿಷ್ಯದಲ್ಲಿ ಸೈಬರ್ ಕಳ್ಳರು ಈ AI ಆ್ಯಪ್‌ಗಳಿಂದ ಕದ್ದ ನಿಮ್ಮ ‘ಫೇಸ್ ಡೇಟಾ’ ಮತ್ತು ಮುಖದ 3D ರಚನೆಯನ್ನು ಬಳಸಿ ನಿಮ್ಮ ಬ್ಯಾಂಕ್ ಖಾತೆಗಳನ್ನೇ ಸುಲಭವಾಗಿ ಲೂಟಿ ಮಾಡಬಹುದು.

ಇದನ್ನೂ ಓದಿ:

ದೇಶದ ಭದ್ರತೆಗೆ ದೊಡ್ಡ ಸವಾಲು

ಇಂತಹ ಬಹುತೇಕ ಆ್ಯಪ್‌ಗಳ ಸರ್ವರ್‌ಗಳು ವಿದೇಶಗಳಲ್ಲಿರುತ್ತವೆ. ನಮ್ಮ ದೇಶದ ಕೋಟ್ಯಂತರ ನಾಗರಿಕರ ಮುಖದ ಡೇಟಾ ವಿದೇಶಿ ಕಂಪನಿಗಳ ಕೈ ಸೇರಿದಾಗ, ಅವರು ಅದನ್ನು ಭಾರತದ ವಿರುದ್ಧವೇ ‘ಡಿಜಿಟಲ್ ಯುದ್ಧ’ ಮಾಡಲು ಬಳಸಬಹುದು. ಅಷ್ಟೇ ಅಲ್ಲ ದೇಶದ ಪ್ರಮುಖ ನಾಯಕರು, ಅಧಿಕಾರಿಗಳ ಪೋಟೋಗಳನ್ನು ಪಡೆದು  ಡೀಪ್ ಫೇಕ್ ವಿಡಿಯೋ ಸೃಷ್ಟಿಸಿ ದೇಶದಲ್ಲಿ ಗೊಂದಲ ಉಂಟುಮಾಡಬಹುದು.

ಆನ್‌ಲೈನ್ ಜಗತ್ತಿನಲ್ಲಿ ಯಾವುದೂ ಸುಮ್ಮನೆ ಸಿಗುವುದಿಲ್ಲ. ನಮಗೆ ಉಚಿತವಾಗಿ ಮನರಂಜನೆ ನೀಡುವ ಇಂತಹ ಆ್ಯಪ್‌ಗಳು ನಮ್ಮ ವೈಯಕ್ತಿಕ ಮಾಹಿತಿಯನ್ನೇ ಆಹುತಿ ತೆಗೆದುಕೊಳ್ಳುತ್ತವೆ. ನಾಲ್ಕು ಲೈಕ್ಸ್ ಮತ್ತು ಕಮೆಂಟ್‌ಗಳಿಗಾಗಿ ಮಾರುಹೋಗಿ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬೇಡಿ. ಟ್ರೆಂಡ್‌ಗಳ ಹಿಂದೆ ಓಡುವ ಮುನ್ನ ನಿಮ್ಮ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !