ಬ್ರಿಟನ್ ಲೇಖಕಿ ನಿತಾಶಾ ಕೌಲ್‌ಗೆ ಏರ್‌ಪೋರ್ಟ್‌ನಿಂದಲೇ ಗೇಟ್‌ ಪಾಸ್‌ ಕೊಟ್ಟ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತ ಮೂಲದ ಬ್ರಿಟನ್ ಪ್ರೊಫೆಸರ್, ಲೇಖಕಿ ನಿತಾಶಾ ಕೌಲ್‌ಗೆ (Nitasha Kaul) ದೇಶ ಪ್ರವೇಶವನ್ನು ಕೇಂದ್ರ ಸರ್ಕಾರ (Narendra Modi Government) ನಿರಾಕರಿಸಿದೆ.

ರಾಜ್ಯ ಸರ್ಕಾರದಿಂದ ಭಾರತ ವಿರೋಧಿ ಧೋರಣೆ ಹೊಂದಿರುವ ಇಂಗ್ಲೆಂಡ್‌ ಮೂಲದ ಪ್ರೊಫೆಸರ್‌ ನಿತಾಶಾ ಕೌಲ್‌ಗೆ ಆಹ್ವಾನ ನೀಡಲಾಗಿತ್ತು. ಆದರೆ, ಈಕೆ ಬೆಂಗಳೂರು ಏರ್‌ಪೋರ್ಟ್‌ಗೆ ಬಂದ ಬೆನ್ನಲ್ಲಿಯೇ ಆಕೆಯನ್ನು ಒಂದು ದಿನ ಜೈಲಿನಲ್ಲಿಟ್ಟು, ವಿಮಾನ ನಿಲ್ದಾಣದಿಂದಲೇ ಕೇಂದ್ರ ಸರ್ಕಾರ ಗೇಟ್‌ ಪಾಸ್‌ ನೀಡಿದೆ.

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಂವಿಧಾನ & ರಾಷ್ಟ್ರೀಯ ಏಕತಾ ಸಮಾವೇಶದಲ್ಲಿ ಇವರ ಕಾರ್ಯಕ್ರಮವಿತ್ತು. ವಿಶೇಷ ಉಪನ್ಯಾಸ ನೀಡಲು ನಿತಾಶಾ ಕೌಲ್‌ ಆಗಮಿಸಿದ್ದರು. ಆದರೆ, ಬೆಂಗಳೂರು ಪ್ರವೇಶವನ್ನು ಅಧಿಕಾರಿಗಳು ತಡೆದಿದ್ದಾರೆ. ಓಸಿಐ ಕಾರ್ಡ್‌ (ಓವರ್‌ಸೀಸ್‌ ಸಿಟಿಜನ್‌ ಆಫ್‌ ಇಂಡಿಯಾ) ಹೊಂದಿರುವ ಈಕೆಯನ್ನು ಲಂಡನ್‌ಗೆ ಗಡಿಪಾರು ಮಾಡಲಾಗಿದೆ.

ಈ ಬಗ್ಗೆ ಲೇಖಕಿ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ನಿತಾಶಾ ಕೌಲ್‌, ನಾನು ಭಾರತ ವಿರೋಧಿ ಅಲ್ಲ. ಆರ್​ಎಸ್​ಎಸ್​ ಟೀಕಿಸಿದ್ದಕ್ಕೆ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ನಾನು ಸರ್ವಾಧಿಕಾರಿ ಧೋರಣೆ ವಿರುದ್ಧ, ಪ್ರಜಾಪ್ರಭುತ್ವದ ಪರವಾಗಿದ್ದೇನೆ. ಕರ್ನಾಟಕ ಆಹ್ವಾನ ನೀಡಿತ್ತು. ಆದರೆ, ಕೇಂದ್ರ ಸರ್ಕಾರ ಅವಕಾಶ ನೀಡಿರಲಿಲ್ಲ. ಹಲವು ವರ್ಷಗಳಿಂದ ಹಿಂದುತ್ವ ಟ್ರೋಲ್​ಗಳಿಂದ ನನಗೆ ಬೆದರಿಕೆ ಹಾಕಲಾಗುತ್ತಿದೆ. ಕೊಲೆ,ಅತ್ಯಾಚಾರ,ನಿಷೇಧ ಸೇರಿ ಹಲವು ರೀತಿಯಾಗಿ ಧಮ್ಕಿ ಹಾಕಲಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾಸತ್ತಾತ್ಮಕ & ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಮಾತನಾಡುವ ಸಲುವಾಗಿ ಬೆಂಗಳೂರಿಗೆ ಹೋಗಿದ್ದೆ. ಆದರೆ, ಕೇಂದ್ರ ಸರ್ಕಾರ ಬೆಂಗಳೂರು ಪ್ರವೇಶಕ್ಕೆ ಅವಕಾಶವನ್ನೇ ಕೊಡಲಿಲ್ಲ. ಬೆಂಗಳೂರು ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲೇ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಅಧಿಕಾರಿಗಳು ನನಗೆ ಕಿರುಕುಳ ನೀಡಿದ್ದಲ್ಲದೆ, ಕನಿಷ್ಠ ಸೌಲಭ್ಯ ನೀಡಲಿಲ್ಲ.24 ಗಂಟೆಯಲ್ಲೇ ಬೆಂಗಳೂರಿಂದ ಲಂಡನ್​ಗೆ ವಾಪಸ್​ ಕಳಿಸಿದ್ದಾರ. ಇದು ದೆಹಲಿ ಆದೇಶ.. ನಾವು ಏನು ಮಾಡಲಾಗಲ್ಲ ಎಂದು ಅಧಿಕಾರಿಗಳು ಹೇಳಿದ್ದರು ಎಂದು ನಿತಾಶಾ ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಆಹ್ವಾನದ ಮೇರೆಗೆ ಬಂದಿದ್ದ ನಿತಾಶಾ ಕೌಲ್‌ಗೆ ಆಹ್ವಾನ ನೀಡಲಾಗಿತ್ತು. ಇದನ್ನು ಟೀಕೆ ಮಾಡಿರುವ ಬಿಜೆಪಿ, ಪಾಕ್​ ಪರ ಇರುವವರಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ ಎಂದು ಟೀಕಿಸಿದೆ. ಇನ್ನು ಪಾಕ್​ ಪ್ರೇಮಿ ಲೇಖಕಿಗೆ ಕೇಂದ್ರ ಸರ್ಕಾರ ಕೂಡ ತಪರಾಕಿ ಹಾಕಿದೆ.

ಯಾರು ನಿತಾಶಾ ಕೌಲ್?:
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಜನಿಸಿದ್ದ ನಿತಾಶಾ ಕೌಲ್‌, ಪ್ರಸ್ತುತ ಲಂಡನ್‌ನಲ್ಲಿ ವಾಸವಿದ್ದಾರೆ. ಶ್ರೀನಗರದ ಪಂಡಿತ ಕುಟುಂಬವಾಗಿದ್ದ ಈಕೆ, ಬಳಿಕ ಉತ್ತರ ಪ್ರದೇಶಕ್ಕೆ ವಲಸೆ ಬಂದಿದ್ದರು. ಈಗ ಲಂಡನ್​ ವೆಸ್ಟ್​ ಮಿನಿಸ್ಟರ್​ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ, ಅಂತಾರಾಷ್ಟ್ರೀಯ ಸಂಬಂಧ ಬಗ್ಗೆ ಉಪನ್ಯಾಸವನ್ನೂ ನೀಡುತ್ತಾರೆ. ಕಾಶ್ಮೀರಕ್ಕಾಗಿ ಕೇಂದ್ರ ಸರ್ಕಾರ ತಂದ ಕಾನೂನುಗಳ ಬಗ್ಗೆ ವ್ಯಾಪಕವಾಗಿ ಟೀಕೆ ಮಾಡಿದ್ದರು.

ನಿತಾಶಾ ಕೌಲ್‌ ವಿವಾದಗಳು: ನಿತಾಶಾ ಕೌಲ್‌ ಈ ಹಿಂದೆ ‘ಕಾಶ್ಮೀರ ಭಾರತದ ಅವಿಭಾಗ್ಯ ಅಂಗವಲ್ಲ’ಎಂದು ಹೇಳಿದ್ದರು. ಅದಲ್ಲದೆ, ‘ಕಾಶ್ಮೀರಿ ಮಹಿಳೆಯರ ಮೇಲೆ ಭಾರತೀಯ ಸೈನಿಕರಿಂದ ಅತ್ಯಾಚಾರ’ ಎನ್ನುವ ಹೇಳಿಕೆಯನ್ನೂ ನೀಡಿದ್ದರು. ಕಾಶ್ಮೀರದಲ್ಲಿ ಮಾನವೀಯ ಬಿಕ್ಕಟ್ಟು ಎದುರಾಗಿದೆ. ಕಾಶ್ಮೀರದಲ್ಲಿ ಮುಸ್ಲಿಮರ ಮಾರಣಹೋಮ ನಡೆಯುತ್ತಿದೆ. ಕಾಶ್ಮೀರದ ವಿಷಯದಲ್ಲಿ ಭಾರತ ವಸಾಹತುಶಾಹಿ ಶಕ್ತಿಯಂತೆ ವರ್ತಿಸುತ್ತಿದೆ ಹಾಗೂ ಕಾಶ್ಮೀರದ ವಿಷಯವಾಗಿ ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!