ಪಂಜಾಬ್ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್‌ ಹೊಡೆದುರುಳಿಸಿದ BSF; ಕಳೆದ ನಾಲ್ಕು ದಿನಗಳಲ್ಲಿ ನಡೆದ 3ನೇ ಘಟನೆಯಿದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಜಾಬ್‌ನ ಅಮೃತಸರದ ಅಂತರಾಷ್ಟ್ರೀಯ ಗಡಿಯಲ್ಲಿ ಶಂಕಿತ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್ ಒಂದನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಜಿಲ್ಲೆಯ ಛಾನಾ ಗ್ರಾಮದಲ್ಲಿ ಸೋಮವಾರ ರಾತ್ರಿ 8:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಪಂಜಾಬ್ ಗಡಿ ಭಾಗದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇದು ಮೂರನೇ ಇಂತಹ ಘಟನೆಯಾಗಿದೆ. “ಗಡಿಯಲ್ಲಿ ನಿಯೋಜಿಸಲಾದ 183 ನೇ ಬೆಟಾಲಿಯನ್ ಪಡೆಗಳು ಅಮೃತಸರ ಜಿಲ್ಲೆಯ ಛಾನಾ ಗ್ರಾಮದ ಪ್ರದೇಶದಲ್ಲಿ ಪಾಕಿಸ್ತಾನದಿಂದ ಭಾರತದ ಭೂಪ್ರದೇಶಕ್ಕೆ ಪ್ರವೇಶಿಸುವ ಶಂಕಿತ ಡ್ರೋನ್ ಶಬ್ದವನ್ನು ಕೇಳಿಸಿಕೊಂಡ ನಂತರ ಭದ್ರತಾ ಪಡೆಗಳು ಗುಂಡು ಹಾರಿಸುವ ಮೂಲಕ ಶಂಕಿತ ಹಾರುವ ವಸ್ತುವನ್ನು ತಡೆಯಲು ಪ್ರಯತ್ನಿಸಿದವು. ಡ್ರೋನ್‌ಗೆ ಗುಂಡು ಬಡಿದ ಕಾರಣ ಅದು ನೆಲದ ಮೇಲೆ ಬಿದ್ದಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಘಟನೆಯ ಪ್ರದೇಶದಿಂದ ಸುಮಾರು 2.5 ಕೆಜಿ ಶಂಕಿತ ಮಾದಕವಸ್ತುಗಳನ್ನು ಹೊತ್ತ ಕ್ವಾಡ್ ಕಾಪ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 16 ರಂದು, ಡ್ರಗ್ಸ್ ಸಾಗಿಸುವ ಮಾನವರಹಿತ ವೈಮಾನಿಕ ವಾಹನವನ್ನು (UAV) ಇದೇ ರೀತಿಯಲ್ಲಿ ಇದೇ ಪ್ರದೇಶದಲ್ಲಿ ತಟಸ್ಥಗೊಳಿಸಲಾಗಿತ್ತು. ಅಕ್ಟೋಬರ್ 13-14 ರ ಮಧ್ಯರಾತ್ರಿಯಲ್ಲಿ, ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಮತ್ತೊಂದು ಕ್ವಾಡ್ ಕಾಪ್ಟರ್ ಪಾಕಿಸ್ತಾನಿ ಡ್ರೋನ್ ಅನ್ನು ಬಿಎಸ್‌ಎಫ್ ಹೊಡೆದುರುಳಿಸಿತ್ತು. ಪ್ರಸ್ತುತ ಘಟನೆಯು ಮೂರನೇಯದಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!