May 3, 2026
Sunday, May 3, 2026
spot_img

ಬಿಎಸ್‌ವೈ ಅಭಿಮಾನೋತ್ಸವ ರಾಜ್ಯ ರಾಜಕಾರಣದ ಬದಲಾವಣೆಗೆ ನಾಂದಿ: ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ,ಚಿತ್ರದುರ್ಗ:

ಬಿಎಸ್‌ವೈ ಅಭಿಮಾನೋತ್ಸವ ಒಂದು ದಾಖಲೆಯಾ ಕಾರ್ಯಕ್ರಮವಾಗಿದ್ದು, ರಾಜ್ಯ ರಾಜಕಾರಣದ ಬದಲಾವಣೆಗೆ ನಾಂದಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ೫೦ ವರ್ಷದ ರಾಜಕೀಯ ಜೀವನದ ಹಿನ್ನೆಲೆಯಲ್ಲಿ ಮೇ ೯ ರಂದು ನಡೆಸಲು ಉದ್ದೇಶಿಸಿರುವ ಅಭಿಮಾನೋತ್ಸವ ಹಿನ್ನಲೆಯಲ್ಲಿ ಭಾನುವಾರ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ರಾಜ್ಯದ ಜನರು ಕಾಂಗ್ರೇಸ್ ಎಂಬ ಬಿಸಿಲಿನಿಂದ ತಂಪಿನ ವಾತಾವರಣಕ್ಕೆ ಹೋಗಲು ಬಯಸುತ್ತಿದ್ದಾರೆ. ಹಾಗಾಗಿ ಮುಂದಿನ ಕಾಂಗ್ರೇಸ್ ಅಸ್ತಂಗತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಮಲ ಅರಳಲಿದೆ ಎಂದರು.

ರಾಜ್ಯದ ರಾಜಕಾರಣದ ದಿಕ್ಕನ್ನು ಬದಲಿಸಿದವರು ಬಿಎಸ್‌ವೈ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿ ಮುಖ್ಯಮಂತ್ರಿ ಗಾದಿ ಹಿಡಿದವರು. ಹಾಗಾಗಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಏಕೈಕ ಮಾಸ್ ಲೀಡರ್. ಆದರ್ಶಗಳು ತಾಯಿ ಇದ್ದಂತೆ, ಅಧಿಕಾರ ಹೆಂಡತಿ ಇದ್ದಂತೆ. ಅಧಿಕಾರ ಬಂದಾಗ ಬಹುತೇಕರು ಆದರ್ಶಗಳನ್ನು ಮರೆಯುತ್ತಾರೆ. ಆದರೆ ಅಧಿಕಾರದಲ್ಲಿದ್ದಾಗಲೂ ಆದರ್ಶಗಳನ್ನು ಮೈಗೂಡಿಸಿಕೊಂಡು ಆಡಳಿತ ನಡೆಸಿದವರು ಬಿಎಸ್‌ವೈ ಎಂದು ಬಣ್ಣಿಸಿದರು.

ಬಹುತೇಕ ಜನರು ಯಡಿಯೂರಪ್ಪ ಅವರನ್ನು ರೈತ ನಾಯಕ, ಹೋರಾಟಗಾರ ಎಂದು ತಿಳಿದಿದ್ದಾರೆ. ಇದು ಅವರ ಒಂದು ಮುಖವಾದರೆ ಮತ್ತೊಂದು ಮುಖ ಮಾನವೀಯತೆ. ಅವರು ಪಕ್ಷದ ಕಾರ್ಯಕರ್ತರ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ಹೊಂದಿದ್ದರು. ನೊಂದವರ ಕಣ್ಣೀರು ಒರೆಸುವಲ್ಲಿ ಸದಾ ಮುಂದು. ಇಂತಹ ನಾಯಕನ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದ ಅವರು, ಇಂತಹ ಮಹಾನ್ ನಾಯಕನಿಗೆ ಕೃತಜ್ಷತೆ ಸಲ್ಲಿಸುವ ಸಂದರ್ಭ. ಜೊತೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದರು.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೇಸ್ ಸರ್ಕಾರದಿಂದ ರಾಜ್ಯದ ಜನ ರೋಸಿ ಹೋಗಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ಬದಲಾಗುವುದು ಬಹುತೇಕ ಖಚಿತ. ನಾಳೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ಬಂಗಾಳದ ಮಮತಾ ಬೇಗಂ ಮನೆಗೆ ಹೋಗುವುದು ಶತಸಿದ್ಧ. ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಹಾಗಾಗಿ ಬಿಜೆಪಿಗೆ ಒಳ್ಳೆಯ ಕಾಲ ಆರಂಭವಾಗಿದ್ದು, ಕಾರ್ಯಕರ್ತರು ಅಭಿಮಾನೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಬೇಕು ಎಂದು ಹೇಳಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲ ದಿನಗಳು ಬಿಜೆಪಿಗೆ ಶುಭ ದಿನಗಳೇ. ಆಡು ಮುಟ್ಟದ ಸೊಪ್ಪಿಲ್ಲ, ಬಿಎಸ್‌ವೈ ಕೆಲಸ ಮಾಡದ ಕ್ಷೇತ್ರವಿಲ್ಲ. ಹಾಗಾಗಿ ಕಾರ್ಯಕರ್ತರು ಹೊಸ ಹುಮ್ಮದ್ದಿನಿಂದ ಕೆಲಸ ಮಾಡಬೇಕು. ಅಭಿಮಾನೋತ್ಸವದ ಯಶಸ್ಸಿಗೆ ಶ್ರಮಿಸಬೇಕು. ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಎಲ್ಲರೂ ತಮ್ಮ ಮನೆಯ ಕಾರ್ಯ ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಬಿಎಸ್‌ವೈ ಅಭಿಮಾನೋತ್ಸವ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಮಾಜಿ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಬಿಜೆಪಿ ಪಕ್ಷ ವ್ಯಾಪಾರಿಗಳು ಮೇಲ್ವರ್ಗದವರ ಪಕ್ಷ ಎಂದು ವಿರೋಧಿಗಳು ಜರಿಯುತ್ತಿದ್ದರು. ಆದರೆ ಜೀತದಾಳುಗಳ ಹೋರಾಟದಿಂದ ಪಕ್ಷವನ್ನು ದಲಿತ ಕೇರಿಗೆ, ಬಗರ್‌ಹುಕುಂ ಹೋರಾಟದಿಂದ ರೈತರ ಜಮೀನಿಗೆ ಬಿಜೆಪಿ ಪಕ್ಷವನ್ನು ಬಿಎಸ್‌ವೈ ಕೊಂಡೊಯ್ದರು. ಅವರ ರೀತಿ ರಾಜಕಾರಣ ಮಾಡಿದ ಬೇರೆ ಯಾವುದೇ ರಾಜಕಾರಣಿ ಇಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ ಮಾತನಾಡಿದರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಅಶ್ವತ್ಥನಾರಾಯಣ, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ಸದಸ್ಯರಾದ ಭಾರತಿಶೆಟ್ಟಿ, ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಳವೀಕ, ಅಂಬಿಕಾ ಹುಲಿನಾಯ್ಕರ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಸುರೇಶ್‌ಗೌಡ, ಎಸ್.ತಿಪ್ಪೇಸ್ವಾಮಿ, ಎಸ್.ವಿ.ರಾಮಚಂದ್ರ ಯುವ ಮುಖಂಡ ಅನಿತ್‌ಕುಮಾರ್, ಅಭಿಮಾನೋತ್ಸವದ ಉಸ್ತುವಾರಿ ತಮ್ಮೇಶ್‌ಗೌಡ ಮತ್ತಿತರರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !