ಬೌದ್ಧ ಗಯಾ ಬೌದ್ಧರ ನಿಯಂತ್ರಣದಲ್ಲಿರಲಿ: ವಿಶ್ವಸಂಸ್ಥೆಗೆ ಪತ್ರ ಬರೆದ ರಾಜರತ್ನ ಅಂಬೇಡ್ಕರ್

ಹೊಸದಿಗಂತ ವರದಿ,ವಿಜಯಪುರ:

ವಕ್ಫ್ ಕಾಯ್ದೆ ತಿದ್ದುಪಡಿಗಾಗಿ ಮಧ್ಯರಾತ್ರಿ ಅಧಿವೇಶನ ನಡೆಸಿದ ಕೇಂದ್ರ ಸರ್ಕಾರ ಅನೇಕ ವರ್ಷಗಳಿಂದ ಬಿ.ಟಿ. ಆ್ಯಕ್ಟ್ 1949 ಬದಲಾವಣೆ ಮಾಡುವ ಕೂಗಿಗೆ ಮನ್ನಣೆ ನೀಡುತ್ತಿಲ್ಲ, ಬೌದ್ಧ ಗಯಾ, ಬೌದ್ಧ ಧರ್ಮೀಯರ ನಿಯಂತ್ರಣದಲ್ಲಿರಬೇಕು ಎನ್ನುವ ವಿಷಯವಾಗಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸುವಂತೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಡಾ.ಬಿ.ಆರ್‌. ಅಂಬೇಡ್ಕರ್ ಮರಿಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ, ಎಲ್ಲ ಬೌದ್ಧ ಮಂದಿರಗಳು ಅಲ್ಲ ಕೇವಲ ಬೌದ್ಧ ಗಯಾ, ಬೌದ್ಧ ಧರ್ಮೀಯರ ನಿಯಂತ್ರಣದಲ್ಲಿರಬೇಕು ಎಂಬುದು ನಮ್ಮ ಆಶಯ. ಬೋಧಗಯಾದಲ್ಲಿ ಬುದ್ಧನ ಆಶಯಗಳಿಗೆ ವಿರುದ್ಧವಾದ ಆಚರಣೆಗಳು ನಡೆಯುತ್ತಿವೆ, ಹೀಗಾಗಿ ಬಿ.ಟಿ. ಆ್ಯಕ್ಟ್ 1949 ಬದಲಾವಣೆ ಮಾಡಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಬಿಹಾರ ಸರ್ಕಾರಕ್ಕೂ ಮನವಿ ಮಾಡಿಕೊಳ್ಳುತ್ತಲೇ ಬರಲಾಗಿದೆ, ಈಗ ವಿಶ್ವಸಂಸ್ಥೆಗೂ ಸಹ ಮನವಿ ಸಲ್ಲಿಸುವ ಹಂತಕ್ಕೆ ಹೋಗಿದ್ದೇವೆ ಎಂದರು.

ಈ ರಾಜ್ಯದ ಸಂಸದರೊಬ್ಬರಾಗಿದ್ದ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾತುಗಳನ್ನು ಆರಂಭಿಸಿದವರು, ಸಂವಿಧಾನ ಬದಲಾವಣೆ ಆತಂಕಕಾರಿ, ಒಂದೆಡೆ ಖಾಸಗೀಕರಣದ ಮೂಲಕ ಮೀಸಲಾತಿ ಹತ್ತಿಕ್ಕುವ ಕೆಲಸ ನಡೆದಿದೆ, ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಪ್ರಯತ್ನದ ವಿರುದ್ಧ ಪ್ರಬಲ ಧ್ವನಿ ಮೊಳಗಬೇಕಿದೆ ಎಂದರು.

ದಲಿತ ಸಿಎಂ ಆಗಬೇಕು ಎನ್ನುವುದಕ್ಕಿಂತ ದಲಿತರ ಉದ್ಧಾರ ಯಾರು ಮಾಡುತ್ತಾರೋ ಅವರು ಮುಖ್ಯಮಂತ್ರಿಯಾಗಬೇಕು, ದಲಿತರು ರಾಷ್ಟ್ರಪತಿಯಾಗಿದ್ದರೂ ದಲಿತರ ಪರಿಸ್ಥಿತಿ ಬದಲಾಗಿಲ್ಲ, ಬದಲಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯ ಆಧರಿಸಿ ಯಾರು ಆಡಳಿತ ನಡೆಸುತ್ತಾರೋ, ಅವರ ವಿಚಾರಗಳಿಗೆ ಮನ್ನಣೆ ನೀಡುತ್ತಾರೋ ಅವರು ಮುಖ್ಯಮಂತ್ರಿಯಾಗಬೇಕು, ಜಾತಿ ಆಧರಿಸಿ ದಲಿತರು ಮುಖ್ಯಮಂತ್ರಿಯಾದರೆ ಏನು ಪ್ರಯೋಜನವಿಲ್ಲ ಎಂದರು.

ಬ್ರಾಹ್ಮಣ ದಲಿತರ ಉದ್ಧಾರ ಬಯಿಸಿದರೆ ಆತನನ್ನು ಒಪ್ಪಿಕೊಳ್ಳೋಣ, ನಾವು ಬ್ರಾಹ್ಮಣ ವಿರೋಧಿಗಳಲ್ಲ, ಶ್ರೇಣಿಕೃತ ವ್ಯವಸ್ಥೆಯನ್ನು ಪೋಷಿಸುವ ಬ್ರಾಹ್ಮಣವಾದದ ವಿರೋಧಿಗಳು ಎಂದರು.

ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾಗುವ ಅಭ್ಯರ್ಥಿಗಳು ದೇಶದ ಎಲ್ಲ ಪಕ್ಷಗಳ ಗುಲಾಮರಾಗುತ್ತಿದ್ದು, ಇದು ಪೂನಾ ಒಪ್ಪಂದದ ದುಷ್ಪರಿಣಾಮ. ಹೀಗಾಗಿ ಇದನ್ನು ಸಂಪೂರ್ಣ ತಿರಸ್ಕರಿಸುವ ವಾತಾವರಣ ಸೃಷ್ಟಿಯಾಗಿದೆ. ಶಿಕ್ಷಕರು ಹಾಗೂ ಪದವೀಧರರ ಮತಕ್ಷೇತ್ರಗಳಿಗೆ ಶಿಕ್ಷಕರು, ಪದವೀಧರರು ಮಾತ್ರ ಮತದಾರರು, ಉಳಿದವರಿಗೆ ಅಲ್ಲಿ ಅವಕಾಶವಿಲ್ಲ, ಹೀಗಾಗಿ ದಲಿತ ಮೀಸಲು ಮತಕ್ಷೇತ್ರಗಳಲ್ಲಿಯೂ ದಲಿತರು ಅಷ್ಟೇ ಮತದಾನ ಮಾಡುವ ಅವಕಾಶ ಕಲ್ಪಿಸಿದರೆ ತಪ್ಪೇನು? ಈ ತೆರನಾದ ವ್ಯವಸ್ಥೆ ಜಾರಿಯಾಗಲು ಪ್ರಬಲವಾದ ಜನಾಂದೋಲನ ರೂಪಿತವಾಗಬೇಕಿದೆ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಭಗವಾನ್ ಆಗಿಸಬೇಡಿ, ಅವರ ಫೋಟೋ ಇಟ್ಟು ಡಿಜೆ ಹಚ್ಚಿ ಕುಣಿಯುವುದರ ಮೂಲಕ ಅವರ ಜಯಂತಿ ಆಚರಣೆ ಬೇಡ. ಕೆಲವು ಪಟ್ಟಭದ್ರ ವ್ಯಕ್ತಿಗಳು ಡಾ.ಅಂಬೇಡ್ಕರ್ ಜಯಂತಿ ಬರುತ್ತಿದೆ, ತೆಗೆದುಕೊಳ್ಳಿ, ಡಿಜೆ ಹಚ್ಚಿ ಎಂದು ದೇಣಿಗೆ ನೀಡಿ ಡಾ.ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧದ ವಿಚಾರಗಳಿಗೆ ಮನ್ನಣೆ ನೀಡುವ ಷಡ್ಯಂತ್ರ ಸಹ ನಡೆಸಿದ್ದಾರೆ. ಆದರೆ ಅವರ ವಿಚಾರಗಳನ್ನು ಪೂಜಿಸಿ, ಅನುಸರಿಸಿ, ಪಾಲಿಸಬೇಕು ಹೊರತು ಅವರ ಭಾವಚಿತ್ರವನ್ನು ಇಟ್ಟು ಡಿಜೆ ಹಚ್ಚಿ ಮೆರವಣಿಗೆ ಮಾಡುವುದು ಸರಿಯಲ್ಲ ಎಂದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ನಮ್ಮ ಕನ್ನಡದ ಕವಿ ಸಿದ್ದಲಿಂಗಯ್ಯನವರು ಸಹ ತಮ್ಮ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ ಬಾಜು ಭಜಂತ್ರಿಗಳನ್ನು ಮಾಡಿ ಜಯಂತಿಯನ್ನು ಆಚರಿಸುವುದಿಲ್ಲ ಅದರ ತತ್ವಗಳನ್ನು ಪಾಲಿಸಬೇಕು ಎಂದು ಇದನ್ನೇ ಡಾಕ್ಟರ್ ಅಂಬೇಡ್ಕರ್ ಅವರ ಮರಿ ಮೊಮ್ಮಗರು ಅವರು ಸಹ ಹೇಳಿದ್ದಾರೆ ನಾವು ನಾವುಗಳು ಈ ಮಾತುಗಳನ್ನು ಗುರುತಿಸೋಣ.

LEAVE A REPLY

Please enter your comment!
Please enter your name here

error: Content is protected !!