March 29, 2026
Sunday, March 29, 2026
spot_img

ಬಜೆಟ್ ಅಂದ್ರೆ ಕಣ್ಕಟ್ಟು ವಿದ್ಯೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್.ಅಶೋಕ್ ಕೆಂಡಾಮಂಡಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರ ಮಂಡಿಸಲಿರುವ ಮುಂಬರುವ ಬಜೆಟ್ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ 1.15 ಲಕ್ಷ ಕೋಟಿ ರೂ. ಭಾರಿ ಮೊತ್ತದ ಸಾಲ ಮಾಡಿ ಬಜೆಟ್ ಮಂಡಿಸುತ್ತಿದ್ದು, ಇದು ಸಾಮಾನ್ಯ ಜನರ ಮೇಲೆ ತೆರಿಗೆಯ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅವರು ಟೀಕಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ‘ತೆರಿಗೆ ಹೇರುವ ರಾಮಯ್ಯ’ ಎಂದು ಲೇವಡಿ ಮಾಡಿದ ಅಶೋಕ್, ಈಗಾಗಲೇ 36 ರೀತಿಯ ತೆರಿಗೆಗಳನ್ನು ವಿಧಿಸಲಾಗಿದೆ ಎಂದು ಆರೋಪಿಸಿದರು. ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಇಳಿಕೆಯಾಗಿದ್ದರೆ, ರಾಜ್ಯದಲ್ಲಿ ತಿಂಗಳಿಗೆ ನಾಲ್ಕರಂತೆ ಹೊಸ ತೆರಿಗೆಗಳು ಬರುತ್ತಿವೆ ಎಂದರು.

ಸಿದ್ದರಾಮಯ್ಯ ಅವರ ಅಧಿಕಾರಾವಧಿ ಮುಗಿಯುವ ವೇಳೆಗೆ ರಾಜ್ಯದ ಒಟ್ಟು ಸಾಲ 8 ಲಕ್ಷ ಕೋಟಿ ರೂ. ದಾಟಲಿದ್ದು, ಇದು ಆರ್ಥಿಕ ಶಿಸ್ತನ್ನು ಹದಗೆಡಿಸಲಿದೆ. ಜಿಎಸ್‌ಡಿಪಿ ಅಂಕಿಅಂಶಗಳನ್ನು ತಿರುಚಿ ಆರ್ಥಿಕ ಶಿಸ್ತು ಕಾಪಾಡಿದ್ದೇವೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಕಿಡಿಕಾರಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಲವಿಲ್ಲದ ಬಜೆಟ್ ಮಂಡಿಸಿದ್ದರು. ಸಾಲ ಪಡೆಯುವ ಅವಕಾಶವಿದ್ದರೂ ಅವರು ಜನರ ಹಿತದೃಷ್ಟಿಯಿಂದ ಅದನ್ನು ಮಾಡಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಸಾಲದ ಮೇಲೆ ಸರ್ಕಾರ ನಡೆಸುತ್ತಿದೆ ಎಂದು ಟೀಕಿಸಿದರು.

ಗೋವಿಂದರಾವ್ ವರದಿಯಂತೆ ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳ ಅಭಿವೃದ್ಧಿಗೆ ವಾರ್ಷಿಕ 15,000 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಅಶೋಕ್ ಸರ್ಕಾರಕ್ಕೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !