March 29, 2026
Sunday, March 29, 2026
spot_img

ಬಿಜೆಪಿ ಅಧಿಕಾರಕ್ಕೆ ಬಂದ್ರೆ ರಾಜ್ಯದಲ್ಲಿ ಬುಲ್ಡೋಜರ್ ರಾಜಕಾರಣ ಗ್ಯಾರಂಟಿ: ಮಮತಾ ಬ್ಯಾನರ್ಜಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ವಾತಾವರಣ ಕಾವೇರಿದ್ದು, ಟಿಎಂಸಿ ಮತ್ತು ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಶನಿವಾರ ರಾಣಿಗಂಜ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬುಲ್ಡೋಜರ್ ರಾಜಕಾರಣ ನಡೆಯಲಿದೆ ಎಂದು ಆರೋಪಿಸಿದ ಅವರು, ಪಶ್ಚಿಮ ಬಂಗಾಳವನ್ನು ಹಾಳು ಮಾಡಲು ಯತ್ನಿಸಿದರೆ ದೇಶದ ಮಟ್ಟದಲ್ಲಿ ಬಿಜೆಪಿ ಬೆಲೆ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾಲ್ಕನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಎಲ್ಲಾ ವಿರೋಧ ಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ತರಲು ಮುಂದಾಗುವುದಾಗಿ ಘೋಷಿಸಿದರು.

ಚುನಾವಣಾ ಪ್ರಕ್ರಿಯೆಯ ಮೇಲೂ ಅವರು ಪ್ರಶ್ನೆ ಎತ್ತಿದ್ದು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಕಾರ್ಯ ಬಿಜೆಪಿ ಪ್ರಭಾವದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು. ಕೆಲವು ಧಾರ್ಮಿಕ ಮೆರವಣಿಗೆಗಳ ವೇಳೆ ಉಂಟಾದ ಗಲಭೆಗಳನ್ನು ಉಲ್ಲೇಖಿಸಿ, ರಾಜ್ಯದ ಆಡಳಿತ ವ್ಯವಸ್ಥೆ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಇದಕ್ಕೂ ಹೊರತಾಗಿ, ಬಿಜೆಪಿ ಕಲ್ಲಿದ್ದಲು ವ್ಯವಹಾರಗಳಲ್ಲಿ ಅಕ್ರಮ ಹಣ ಗಳಿಸುತ್ತಿದೆ ಎಂದು ಆರೋಪಿಸಿದ ಮಮತಾ, ಟಿಎಂಸಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದೆ ಎಂದು ಹೇಳಿದರು. ಉದ್ಯೋಗಾವಕಾಶ ಸೃಷ್ಟಿ ಮತ್ತು ಕೈಗಾರಿಕಾ ಬೆಳವಣಿಗೆಯಲ್ಲಿ ರಾಜ್ಯ ಸಾಧನೆ ಮಾಡಿದೆ ಎಂಬುದನ್ನೂ ಅವರು ಉಲ್ಲೇಖಿಸಿದರು.

ಚುನಾವಣೆಗೆ ಮುನ್ನ ಬಂಗಾಳ ರಾಜಕೀಯ ಮತ್ತಷ್ಟು ಗರಿಗೆದರಿದ್ದು, ಮುಂದಿನ ದಿನಗಳಲ್ಲಿ ಆರೋಪಗಳ ಕಾಳಗ ತೀವ್ರಗೊಳ್ಳುವ ಸೂಚನೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !