ಉಂಡ ಮನೆಗೇ ಕನ್ನ ಹಾಕಿದವನ ಬಂಧನ

ಹೊಸ ದಿಗಂತ ವರದಿ, ಶ್ರೀಮಂಗಲ:

ತೋಟದ ಮಧ್ಯೆ ಇರುವ ಒಂಟಿ ಮನೆಗೆ ನುಗ್ಗಿ ನಗದು ಹಾಗೂ ಆಭರಣ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 5 ದಿನದಲ್ಲಿ ಶ್ರೀಮಂಗಲ ಪೊಲೀಸರು ಕೇರಳದ ಕಣ್ಣೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಪೊಡಮಕಲ್ ಗ್ರಾಮದ ಸಜೇಶ್ ಕೃಷ್ಣ ಎಂಬಾತನೇ ಬಂಧಿತ ಆರೋಪಿ.
ಈತ ಮೇ 29ರಂದು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದ ಅಣ್ಣೀರ ಎಂ. ಲೋಕೇಶ್ ಹಾಗೂ ಅವರ ಕುಟುಂಬದವರು ತಮ್ಮ ಸಂಬಂಧಿಕರ ಮನೆಗೆ ಹೋಗಿರುವುದನ್ನು ಅರಿತು ರಾತ್ರಿ ಮನೆಯ ಹಿಂಬಾಗಿಲು ಹಾಗೂ ಛಾವಣಿಯನ್ನು ಮುರಿದು 14 ಗ್ರಾಂ.ನ ಚಿನ್ನ, ರೂ. 48 ಸಾವಿರ ನಗದು ಮತ್ತು ಪೀಚೆಕತ್ತಿಯ ಬೆಳ್ಳಿಯ ಸರವನ್ನು ಕಳ್ಳತನ ಮಾಡಿದ್ದನೆನ್ನಲಾಗಿದೆ..
ಸುತ್ತಿಗೆ ಹಾಗೂ ರಾಡ್ ಬಳಸಿ ಕಬ್ಬಿಣದ ಬೀರುವನ್ನು ಮುರಿದು ಕಳವು ಮಾಡಿದ್ದ ಆರೋಪಿ, ರಾತ್ರಿಯೇ ಗ್ರಾಮದಿಂದ ತೆರಳಿ ಮುಂಜಾನೆ ಬಸ್ಸ್ ಮೂಲಕ ಕೇರಳದ ಕಣ್ಣೂರಿಗೆ ತೆರಳಿ ಅಲ್ಲಿ ಆಭರಣವನ್ನು ಮಾರಾಟ ಮಾಡಿ ಹಾಗೂ ನಗದನ್ನು ಬಳಸಿ ರೂ. 16 ಸಾವಿರದ ಮೊಬೈಲ್ ಹಾಗೂ ರೂ. 50 ಸಾವಿರದ ಬೈಕ್ ಖರೀದಿಸಿದ್ದ. ಆರೋಪಿ ಬೆಳೆಗಾರ ಅಣ್ಣೀರ ಲೋಕೇಶ್ ಅವರ ಮನೆಯಲ್ಲಿ ಕಾರ್ಮಿಕನಾಗಿದ್ದ ಈತ ಮನೆಯ ಸಮೀಪದ ಲೈನ್ ಮನೆಯಲ್ಲೇ ವಾಸವಾಗಿದ್ದು, ಮಾಲಕರ ಮನೆಯವರು ಕುಟುಂಬ ಸಮೇತ ಸಂಬಂಧಿಕರ ಮನೆಗೆ ಹೋಗಿರುವುದನ್ನು ಅರಿತು ಕಳವು ಮಾಡಿದ್ದ.
ಕಳವು ಮಾಡಿ ನಾಪತ್ತೆಯಾಗಿದ್ದ ಕಾರ್ಮಿಕ ಸಜೇಶ್ ಕೃಷ್ಣ ಅವರ ಬಗ್ಗೆ ಸಂಶಯ ವ್ಯಕ್ತಪಡಿಸಿ ಬೆಳೆಗಾರ ಲೋಕೇಶ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಶ್ರೀಮಂಗಲ ಪೊಲೀಸರೊಂದಿಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಅಗತ್ಯ ಸಾಕ್ಷ್ಯಾಧಾರ ಕಲೆ ಹಾಕಿದ್ದರು. ಪೊಲೀಸ್ ಶ್ವಾನವು ಆರೋಪಿ ತಂಗಿದ್ದ ಲೈನ್ ಮನೆಗೆ ನುಗ್ಗಿ, ಆರೋಪಿ ಬದಲಿಸಿದ್ದ ಶರ್ಟನ್ನು ಹೊರತಂದಿತ್ತು ಹಾಗೂ ಆರೋಪಿ ತೆರಳಿದ್ದ ರಸ್ತೆಯ ಕುರುಹು ನೀಡಿತ್ತು.
ಆರೋಪಿಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಆತ ಕಳ್ಳತನದ ಹಣ ಹಾಗೂ ಆಭರಣ ಬಳಿಸಿ ಖರೀದಿಸಿದ್ದ ಬೈಕ್, ಖರ್ಚಾಗದೇ ಉಳಿದಿದ್ದ ನಗದು ಹಣ ಮತ್ತು ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ ಪೊಲೀಸರು ಕೇವಲ 5 ದಿನದಲ್ಲಿ ಆರೋಪಿಯನ್ನು ಕೇರಳಕ್ಕೆ ತೆರಳಿ ಬಂಧಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ ಅವರ ನಿರ್ದೇಶನದಂತೆ ಡಿವೈಎಸ್ಪಿ ನಿರಂಜನ್ ರಾವ್ ಅರಸ್ ಮತ್ತು ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ಅವರ ಮಾರ್ಗದರ್ಶನದಲ್ಲಿ ಶ್ರೀಮಂಗಲ ಉಪನಿರೀಕ್ಷಕ ಕೆ.ಆರ್. ರವಿಶಂಕರ್, ಸಿಬ್ಬಂದಿಗಳಾದ ಬಿ.ಟಿ. ಮಂಜುನಾಥ್, ಖಾಲಿದ್, ಶಿವು, ರಘು ಸುಬ್ರಮಣಿ, ಚಂದ್ರಶೇಖರ್, ಚಾಲಕ ರಾಮಲಿಂಗ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!