ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಯುವ ಆಟಗಾರ ಬಿಹಾರದ 14 ವರ್ಷದ ವೈಭವ್ ಸೂರ್ಯವಂಶಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ₹50 ಲಕ್ಷದ ಚೆಕ್ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಕ್ರೀಡಾ ಸಚಿವೆ ಶ್ರೇಯಸಿ ಸಿಂಗ್ ಇದ್ದರು.
ಇತ್ತೀಚಿಗೆ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು. ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 80 ಎಸೆತಗಳನ್ನೆದುರಿಸಿ 15 ಬೌಂಡರಿ ಮತ್ತು 15 ಸಿಕ್ಸರ್‌ಗಳೊಂದಿಗೆ 175 ರನ್ ಗಳಿಸಿದ್ದರು. ಈ ಟೂರ್ನಿಯ ಏಳು ಪಂದ್ಯಗಳಲ್ಲಿ 169.50ರ ಸ್ಟ್ರೈಕ್ ರೇಟ್ ಮತ್ತು 62.71ರ ಸರಾಸರಿಯಲ್ಲಿ 439 ರನ್ ಗಳಿಸಿದ್ದರು.
ಅಂಡರ್ 19 ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ಗಳಿಸಿ ಮುಂಚೂಣಿಯಲ್ಲಿರುವ ಇವರು, 25 ಇನ್ನಿಂಗ್ಸ್‌ಗಳಲ್ಲಿ 56.48 ಸರಾಸರಿಯಲ್ಲಿ 1,412 ರನ್ ಗಳಿಸಿದ್ದಾರೆ. 165ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ.
2025ರ ಋತುವಿಗೆ ಮುನ್ನ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ, ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 1.1 ಕೋಟಿ ರೂ. ಕೊಟ್ಟು ಖರೀದಿಸಿತ್ತು.



