ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧದ (India vs England) ಎರಡನೇ ಟೆಸ್ಟ್ ಪಂದ್ಯವನ್ನು ರೋಹಿತ್ ಪಡೆ 106 ರನ್ಗಳಿಂದ ಗೆದ್ದು ಬೀಗಿದೆ.
ಬೌಲಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ (R Ashwin) ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವಲ್ಲಿ ಪ್ರಮುಖ ಕೊಡುಗೆ ನೀಡಿದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ಈ ಆಟಗಾರರನ್ನು ಗೆಲುವಿನ ರೂವಾರಿಗಳೆಂದು ಬಣ್ಣಿಸಿದರು.
‘ಜಸ್ಪ್ರೀತ್ ಬುಮ್ರಾ ನಮಗೆ ಚಾಂಪಿಯನ್ ಆಟಗಾರ. ಈ ರೀತಿಯ ಪಂದ್ಯವನ್ನು ಗೆದ್ದಾಗ, ನಾವು ಎಲ್ಲಾ ಪ್ರದರ್ಶನಗಳತ್ತ ಗಮನ ಹರಿಸಬೇಕಾಗುತ್ತದೆ. ನಮ್ಮ ತಂಡ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಪಂದ್ಯ ಗೆಲ್ಲಬೇಕಾದರೆ ಬ್ಯಾಟಿಂಗ್ ಒಂದೇ ಕಾರಣವಾಗುವುದಿಲ್ಲ. ಬದಲಿಗೆ ಬೌಲರ್‌ಗಳು ಕೂಡ ಅದ್ಭುತ ಪ್ರದರ್ಶನ ನೀಡಬೇಕು. ಈ ಪಂದ್ಯದಲ್ಲಿ ನಮ್ಮ ತಂಡದ ಬೌಲರ್‌ಗಳು ಅದ್ಭುತ ಪ್ರದರ್ಶ ನೀಡಿದರು. ಅದರಲ್ಲೂ ಬುಮ್ರಾ, ಆಟದ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಅವರು ಈ ದಾರಿಯಲ್ಲಿ ಇನ್ನು ಸಾಕಷ್ಟು ದೂರ ಸಾಗಬೇಕಾಗಿದೆ. ಅವರು ತಂಡಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ’ ಎಂದು ರೋಹಿತ್ ಹೊಗಳಿದ್ದಾರೆ.
ಯಾರ್ಕರ್ ಕಿಂಗ್ ಬುಮ್ರಾ ಈ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಒಟ್ಟು 9 ವಿಕೆಟ್ ಕಬಳಿಸಿದರು. ಇದು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತು.
ಇನ್ನು ಪಿಚ್ ಬಗ್ಗೆ ಮಾತನಾಡಿದ ರೋಹಿತ್, ‘ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿತ್ತು. ಇದಕ್ಕೆ ಪೂರಕವಾಗಿ ತಂಡದ ಅನೇಕ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ಪಡೆದುಕೊಂಡ ನಂತರ ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ನಮ್ಮ ತಂಡ ಹಲವು ಯುವ ಆಟಗಾರರನ್ನು ಒಳಗೊಂಡಿದೆ. ಹೀಗಾಗಿ ಈ ಯುವ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮುಖ್ಯ. ಯುವ ತಂಡವನ್ನು ಕಟ್ಟಿಕೊಂಡು ಇಂಗ್ಲೆಂಡ್‌ನಂತಹ ತಂಡವನ್ನು ಮಣಿಸಿರುವುದು ನಮಗೆ ಹೆಮ್ಮೆಯ ಸಂಗತಿ. ತಂಡದಲ್ಲಿರುವ ಹಲವು ಆಟಗಾರರು ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿಲ್ಲ. ಈ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಮಯ ಬೇಕಾಗುತ್ತದೆ. ಅವರು ಯಾವುದೇ ಒತ್ತಡವಿಲ್ಲದೆ ಆಡಬೇಕೆಂದು ನಾನು ಬಯಸುತ್ತೇನೆ’ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.