October 6, 2026
Tuesday, October 6, 2026
spot_img

ಬುಮ್ರಾ ಸ್ಪೆಷಲ್ ಬೌಲಿಂಗ್: ಖಾತೆಯನ್ನೇ ತೆರೆಯಲಾಗದೆ ತಲೆಬಾಗಿದ ಅಫ್ಘಾನಿಸ್ತಾನ್ ಕ್ಯಾಪ್ಟನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಮ್ಯಾಜಿಕಲ್ ಬೌಲಿಂಗ್‌ನಿಂದ ಇಡೀ ಕ್ರಿಕೆಟ್ ಜಗತ್ತು ತಿರುಗಿ ನೋಡುವಂತೆ ಮಾಡಿದ್ದಾರೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾಗೆ ಬುಮ್ರಾ ಅಕ್ಷರಶಃ ಕನಸಿನ ಆರಂಭ ತಂದುಕೊಟ್ಟರು. ಪಂದ್ಯದ ಫಸ್ಟ್ ಓವರ್‌ನಲ್ಲೇ ಒಂದೇ ಒಂದು ರನ್ ಕೊಡದೆ ‘ಮೇಡನ್ ಓವರ್’ ಎಸೆಯುವ ಮೂಲಕ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ದೇಶಗಳ ಪೈಕಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಮೇಡನ್ ಓವರ್ ಎಸೆದ ವಿಶ್ವದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಷ್ಟೇ ಅಲ್ಲ, ಬುಮ್ರಾ ತಮ್ಮ ಕ್ರಿಕೆಟ್ ಕರಿಯರ್‌ನಲ್ಲೇ ಮೊದಲ ಬಾರಿಗೆ ಪಂದ್ಯದ ಫಸ್ಟ್ ಇನ್ನಿಂಗ್ಸ್‌ನಲ್ಲಿ ಮೇಡನ್ ಓವರ್ ಎಸೆದು ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಕ್ರೀಸ್‌ಗೆ ಬಂದ ಅಫ್ಘಾನಿಸ್ತಾನ್ ನಾಯಕ ಹಾಗೂ ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್, ಬುಮ್ರಾ ಅವರ ಚುರುಕಿನ ಲೈನ್ ಅಂಡ್ ಲೆಂಗ್ತ್ ಬೌಲಿಂಗ್‌ಗೆ ಕಂಗಾಲಾಗಿ ರನ್ ಖಾತೆಯನ್ನೇ ತೆರೆಯಲಾಗದೆ ಪರದಾಡಿದರು.

ಈ ಅದ್ಭುತ ಓವರ್‌ನೊಂದಿಗೆ ಬುಮ್ರಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಒಟ್ಟು 13 ಮೇಡನ್ ಓವರ್‌ಗಳನ್ನು ಪೂರೈಸಿದ್ದಾರೆ. ಈ ಹಿಂದೆ 12 ಮೇಡನ್ ಎಸೆದು ಜಂಟಿ ಅಗ್ರಸ್ಥಾನದಲ್ಲಿದ್ದ ಜಿಂಬಾಬ್ವೆಯ ರಿಚರ್ಡ್ ನ್ಗಾರವಾರನ್ನು ಹಿಂದಿಕ್ಕಿ, ಬುಮ್ರಾ ಈಗ ಸೋಲೋ ಆಗಿ ಸಿಂಗಲ್ ಚೇರ್‌ನಲ್ಲಿ ಕುಳಿತಿದ್ದಾರೆ.

ಇನ್ನು ಭಾರತದ ಪರ ಟಿ20ಯಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್ ಮೇಡನ್ ಮಾಡಿದ ಬೌಲರ್‌ಗಳ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ 6 ಬಾರಿ ಈ ಸಾಧನೆ ಮಾಡಿ ನಂಬರ್-1 ನಲ್ಲಿದ್ದರೆ, ಯುವ ವೇಗಿ ಅರ್ಶ್‌ದೀಪ್ ಸಿಂಗ್ 2 ಬಾರಿ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟಿನಲ್ಲಿ ಬುಮ್ರಾ ಅವರ ಈ ಭರ್ಜರಿ ಪ್ರದರ್ಶನ ಕ್ರಿಕೆಟ್ ಪ್ರಿಯರಿಗೆ ಭಾರೀ ಖುಷಿ ತಂದಿದೆ.

Must Read