ಕುಶಾಲನಗರ ಸರಕಾರಿ ಶಾಲೆಯಲ್ಲಿ ಹಿಜಾಬ್’ನೊಂದಿಗೆ ಬುರ್ಖಾ ಪ್ರತ್ಯಕ್ಷ!

ದಿಗಂತ ವರದಿ ಮಡಿಕೇರಿ:

ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಕೊಡಗಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು.
ಜಿಲ್ಲೆಯ ಕೊಂಡಂಗೇರಿ, ಹಾಕತ್ತೂರು ಮತ್ತು ಕೊಟ್ಟಮುಡಿ ಶಾಲೆಗಳಿಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದೊಂದಿಗೆ ಸಮಾಲೋಚನೆ ನಡೆಸಿದರು.
ಈ ನಡುವೆ ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರವೂ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ್ದು, ಶಾಲಾ ಮುಖ್ಯಸ್ಥರು ಅವರನ್ನು ತಡೆದು ವಾಪಾಸು ಕಳುಹಿಸಿದರು.
ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್’ಗೆ ಸೋಮವಾರ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರ ಮನವೊಲಿಸಲು ಪ್ರಾಂಶುಪಾಲ ಅಂತೋಣಿ ಆಳ್ವಾರಿಸ್ ಅವರು ಪ್ರಯತ್ನಿಸಿದ್ದರಾದರೂ, ಇದಕ್ಕೆ ವಿದ್ಯಾರ್ಥಿನಿಯರು ಸ್ಪಂದಿಸದಿದ್ದಾಗ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಅಲ್ಲದೆ ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚನೆಯನ್ನೂ ಮಾಡಲಾಗಿತ್ತು.
ಆದರೆ ಮಂಗಳವಾರ ಮತ್ತೆ 20 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ್ದು, ಹೈಕೋರ್ಟ್ ಮಧ್ಯಂತರ ಆದೇಶದ ಅನ್ವಯ ಹಿಜಾಬ್ ಧರಿಸಿ ತರಗತಿಯಲ್ಲಿರಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಅವರನ್ನು ವಾಪಾಸು ಕಳುಹಿಸಲಾಯಿತು.
ಹಿಜಾಬ್ ಜೊತೆ ಬುರ್ಖಾವೂ ಬಂತು! ಹೈಕೋರ್ಟ್’ನ ಮಧ್ಯಂತರ ಆದೇಶದ ನಡುವೆಯೂ ಕುಶಾಲನಗರದ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಹಿಜಾಬ್ ಜೊತೆ ಬುರ್ಖಾವೂ ಪ್ರತ್ಯಕ್ಷವಾಗಿದೆ.
ಕೆಲವು ಪೋಷಕರು ಮಕ್ಕಳ ಹಾದಿ ತಪ್ಪಿಸುತ್ತಿರುವ ಪ್ರಕರಣವೂ ಬೆಳಕಿಗೆ ಬಂದಿದೆ.
ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ನಡೆಸಿದ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಪಾಲಿಸಲು ಒಪ್ಪದ ಐದು ಮಂದಿ ವಿದ್ಯಾರ್ಥಿನಿಯರನ್ನು ಪೋಷಕರೊಂದಿಗೆ ಮನೆಗೆ ಕಳುಹಿಸಲಾಯಿತು.
ನೆಲ್ಯಹುದಿಕೇರಿ ಹಾಗೂ ಕುಶಾಲನಗರ ಸರಕಾರಿ ಶಾಲೆಗಳ ಎದುರು ಪೊಲೀಸರು ಪಹರೆ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!