ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ನಾಯಿಗೂ ಒಂದು ದಿನ ಬರುತ್ತದೆ ಎಂಬ ಗಾದೆ ಬರ್ನಿ ಜೀವನದಲ್ಲಿ ಸುಳ್ಳಾಗಲಿಲ್ಲ. ಈ ನಾಯಿ ಈಗ ಪಂಚತಾರಾ ಹೋಟೆಲ್ ನಲ್ಲಿ ಚೀಫ್ ಹ್ಯಾಪಿನೆಸ್ ಆಫೀಸರ್ ಹುದ್ದೆ, ಒಳ್ಳೆ ಸಂಬಳ ಪಡೆಯುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಬರ್ನಿಯನ್ನು ಹೊಟೇಲ್‌ನವರು ಸಾಕಿದ್ದಲ್ಲ, ಬದಲಿಗೆ ರಸ್ತೆಯಲ್ಲಿ ಓಡಾಡಿಕೊಂಡಿದ್ದ ಬರ್ನಿ ದಿಕ್ಕುತೋಚದೆ ಬೆಂಗಳೂರಿನ ಪಂಚತಾರಾ ಹೋಟೆಲ್ ಒಂದರ ಗೇಟಿನ ಮುಂದೆ ನಿಂತಿದೆ. ಸಾಮಾನ್ಯವಾಗಿ ನಾಯಿಗಳು ಬಂದರೆ ಅಲ್ಲಿಮದ ಅವುಗಳನ್ನು ಓಡಿಸುವದುದ ಸಹಜ. ಆದರೆ ಈ ಹೊಟೇಲ್ ಸಿಬ್ಬಂದಿ ಹಾಗೆ ಮಾಡದೆ ಗೇಟ್ ತೆರೆದು ಆಹ್ವಾನ ನೀಡಿದ್ದಾರೆ. ಲಲಿತ್ ಅಶೋಕ್ ಹೋಟೆಲ್‌ಗೆ ಆಗಮಿಸಿದಾಗ ಬರ್ನಿ ಸ್ಥಿತಿ ಅಷ್ಟೇನೂ ಸರಿಯಿರಲಿಲ್ಲ. ಮೈತುಂಬಾ ಗಾಯಗಳೊಂದಿಗೆ ಹೆದರುತ್ತಾ ಬಂದಿತ್ತು. ಹೋಟೆಲ್ ಸಿಬ್ಬಂದಿ ಆರೈಕೆ ಮಾಡಿ ಇದೀಗ ಚೀಫ್ ಹ್ಯಾಪಿನೆಸ್ ಆಫಿಸರ್ ಹುದ್ದೆ ನೀಡಿದೆ.
ಹೋಟೆಲ್‌ನಲ್ಲಿ ಬರ್ನಿ ನಡವಳಿಕೆ ತುಂಬಾ ಮುದ್ದಾಗಿದೆ. ಅತಿಥಿಗಳು ಮತ್ತು ಉದ್ಯೋಗಿಗಳನ್ನು ನಗಿಸುವುದು ಮಾತ್ರವಲ್ಲದೆ ಅವರೊಂದಿಗೆ ಆತ್ಮೀಯ ಸಂಪರ್ಕ ಬೆಳೆಸಿಕೊಂಡಿದೆ. ಹೋಟೆಲ್‌ಗೆ ಬರುವ ಗ್ರಾಹಕರು ಬರ್ನಿಯೊಂದಿಗೆ ಸಮಯ ಕಳೆಯಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಅತಿಥಿಗಳಿಗೆ ತೊಂದರೆ ಕೊಡದೆ ಅವರೊಂದಿಗೆ ಪ್ರೀತಿಯಿಂದ ವರ್ತಿಸುತ್ತದೆ ಅಂತಾರೆ ಹೋಟೆಲ್ ಸಿಬ್ಬಂದಿ.
ಬರ್ನಿಗೆ ಹೋಟೆಲ್ ಸಿಬ್ಬಂದಿಯಷ್ಟೇ ಸಂಬಳ ನೀಡಲಾಗುತ್ತದೆ. ಹೋಟೆಲ್‌ನಲ್ಲಿರುವ ಎಲ್ಲಾ ಉದ್ಯೋಗಿಗಳಿಗೆ ಬರ್ನಿ ಈಗ ಸ್ಟ್ರೆಸ್ ಬಸ್ಟರ್ ಆಗಿದೆ. ಬರ್ನಿಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯವಾಗಿದೆ. ಇದರಿಂದಾಗಿ ಹೋಟೆಲ್‌ಗೂ ಒಳ್ಳೆಯ ಹೆಸರು ಬಂದಿದೆ.