Sunday, December 3, 2023

Latest Posts

ಧರ್ಮದ ಆಚರಣೆಯಿಂದ ಶ್ರೇಯಸ್ಸು ಲಭ್ಯ: ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು

ಹೊಸದಿಗಂತ ವರದಿ ಬೆಂಗಳೂರು

ಧರ್ಮದ ಆಚರಣೆಯಿಂದ ಶ್ರೇಯಸ್ಸು ಲಭಿಸಲಿದೆ ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು ನುಡಿದರು. ನಗರದ ಶಂಕರಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದ ಅವರು ಧರ್ಮದ ಅನುಷ್ಠಾನ ಅಪಾರವಾದ ಫಲ ಸಿಗಲಿದೆ. ತಾತ್ಕಾಲಿಕ ಸಂತೋಷಕ್ಕಾಗಿ ಧರ್ಮಾಚರಣೆಯ ನಿಯಮಗಳನ್ನು ಬಿಡಬಾರದು. ಜೀವನದ ಸಾರ್ಥಕತೆಗೆ ಧರ್ಮದ ಅನುಷ್ಠಾನವೇ ಮುಖ್ಯ, ಇದರಿಂದ ಮಾನವನ ಜೀವನದಲ್ಲಿ ಪ್ರಯೋಜನ ಲಭಿಸಲಿದೆ ಎಂದು ಹೇಳಿದರು.

ಮನೆಯಲ್ಲಿನ ಮಕ್ಕಳಿಗೆ ನಮ್ಮ ಪರಂಪರೆ ಮತ್ತು ಧರ್ಮ ಧರ್ಮದ ಸೂಕ್ಷ್ಮತೆಯನ್ನು ತಿಳಿಸಬೇಕಷ್ಟೇ ಅಲ್ಲ ಸಂಸ್ಕಾರವನ್ನು ಕಲಿಸಬೇಕು. ಜಗತ್ತಿನಲ್ಲಿ ಬ್ರಾಹ್ಮಣನಾಗಿ ಜನ್ಮ ಪಡೆಯುವುದು ಅನೇಕ ಜನ್ಮಗಳಲ್ಲಿ ಪಡೆದ ಪುಣ್ಯದಿಂದ ಮಾತ್ರ ಸಾಧ್ಯ. ಅದನ್ನು ಸಾರ್ಥಕ ಪಡಿಸಿಕೊಳ್ಳುವುದಕ್ಕಾಗಿ ಧರ್ಮ ಅನುಷ್ಠಾನ ಮಾಡಬೇಕು. ಬರಿ ಬ್ರಾಹ್ಮಣನಾಗಿ ಹುಟ್ಟುವುದರಿಂದ ಬ್ರಾಹ್ಮಣ್ಯ ಲಭಿಸುವುದಿಲ್ಲ. ಪರಿಪೂರ್ಣ ಬ್ರಾಹ್ಮಣನಾಗಲು ಧರ್ಮದ ಆಚರಣೆಯೂ ಮುಖ್ಯ ಎಂದರು.

ಬ್ರಾಹ್ಮಣ ಸಮಾಜದ ಪ್ರತಿಯೊಬ್ಬರೂ ಐಕ್ಯಮತ್ಯ ಸಾಧಿಸಿ ಇತರ ಧರ್ಮಗಳಿಗೆ ಮಾದರಿಯಾಗಬೇಕು. ಹಾಗೆಯೇ ಧರ್ಮವನ್ನು ಮೊದಲು ಅರಿತು ಇತರರಿಗೆ ಮಾರ್ಗದರ್ಶನ ಮಾಡುವಂತಾಗಬೇಕು. ಆಗ ಇತರ ಸಮಾಜದವರು ಬ್ರಾಹ್ಮಣರನ್ನು ಕೀಳಾಗಿ ಕಾಣುವ ಪ್ರಮೇಯವೇ ಬರುವುದಿಲ್ಲ. ಅಲ್ಲದೇ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದನ್ನು ಕಲಿತುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಶಂಕರರ ಕೊಡುಗೆ ಅಪಾರ:

ಪ್ರಾಸ್ತಾವಿಕ ಭಾಷಣ ಮಾಡಿದ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಸನಾತನ ಧರ್ಮ ಇವತ್ತಿಗೂ ಭಾರತ ದೇಶದಲ್ಲಿ ಜೀವಂತವಾಗಿ ಸದೃಢವಾಗಿ ಉಳಿದಿದೆ ಎಂದರೆ ಅದಕ್ಕೆ ಕಾರಣಕರ್ತರು ಶ್ರೀ ಶಂಕರ ಭಗವತ್ಪಾದರು. ಅನೇಕ ಮೂಢನಂಬಿಕೆ ಮತ್ತು ಅತಿಯಾದ ಕರ್ಮಶ್ರದ್ಧೆ ಮೋಕ್ಷಕ್ಕೆ ಕಾರಣ ಎಂದು ನಂಬಿದ್ದ ಸಮಯದಲ್ಲಿ ಮತ್ತು ನಾನಾ ಪಂಥಗಳಲ್ಲಿ ಹರಿದು ಹಂಚಿ ಹೋಗಿದ್ದ ಸನಾತನ ಧರ್ಮವನ್ನು ಒಂದುಗೂಡಿಸಿ ಅದನ್ನು ಒಂದು ಚೌಕಟ್ಟಿನಲ್ಲಿ ತಂದ ಶ್ರೇಯಸ್ಸು ಶ್ರೀ ಶಂಕರ ಭಗವತ್ಪಾದರರದ್ದು ಎಂದು ನುಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!