ಮುಂಬೈನಲ್ಲಿ ಬಸ್ ಅಪಘಾತ: 6 ಮಂದಿ ಸಾವು, 49 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರೇಕ್‌ಫೇಲ್ ಆಗಿ ಬಸ್‌ ನಿಯಂತ್ರಣ ತಪ್ಪಿದ್ದು, ಪರಿಣಾಮ 6 ಜನ ಸಾವನ್ನಪ್ಪಿದ್ದು, 49 ಜನ ಗಾಯಗೊಂಡಿರುವ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ.

ಬೃಹತ್ ಮುಂಬೈ ಸರಬರಾಜು ಮತ್ತು ಸಾರಿಗೆ ಸಂಸ್ಥೆಯ ಬಸ್‌ನ ಬ್ರೇಕ್ ಫೇಲ್ ಆದ ಪರಿಣಾಮ ಅಪಘಾತ ಸಂಭವಿಸಿದೆ. ಸೋಮವಾರ (ಡಿ.9) ರಾತ್ರಿ 9:50ಕ್ಕೆ ಬಸ್ ಕುರ್ಲಾ ನಿಲ್ದಾಣದಿಂದ ಅಂಧೇರಿಗೆ ಹೋಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿ 30 ರಿಂದ 40 ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಪಾದಚಾರಿಗಳ ಮೇಲೆ ಹಾಯ್ದು ಮುಂದಕ್ಕೆ ಸಾಗಿ ಎದುರಿಗೆ ಇದ್ದ ಗೋಡೆಗೆ ಡಿಕ್ಕಿ ಹೊಡೆದು ಬಳಿಕ ಅಲ್ಲಿಯೇ ನಿಂತಿದೆ.

ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 49 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಿಯಾನ್ ಮತ್ತು ಕುರ್ಲಾ ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿವೆ. ಬಸ್ ಅತೀವೇಗದಿಂದ ಕೆಳಗಿಳಿಯುತ್ತಿದ್ದು, ಮೊದಲು ಆಟೋ ರಿಕ್ಷಾಗೆ ಡಿಕ್ಕಿ ಹೊಡೆಯುತ್ತದೆ.

ಈ ಕುರಿತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಯೊಬ್ಬರು ಮಾತನಾಡಿ, ಬಸ್‌ನ ಬ್ರೆಕ್ ಫೇಲ್ ಆದ ಪರಿಣಾಮ ಈ ಅಪಘಾತ ಸಂಭವಿಸಿದೆ. ವಾಹನವು ಒಲೆಕ್ಟ್ರಾದಿಂದ ತಯಾರಿಸಲ್ಪಟ್ಟ 12 ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್ ಆಗಿದ್ದು, ಇದನ್ನು ಬೆಸ್ಟ್ ಲೀಸ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಬಸ್ ಕೇವಲ ಮೂರು ತಿಂಗಳ ಹಳೆಯದು. ಇದನ್ನು ಈ ವರ್ಷ ಆ.20 ರಂದು ಖರೀದಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಸದ್ಯ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಿಎನ್‌ಎಸ್ ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಚಾಲಕ ಕುಡಿದು ಬಸ್ ಚಲಾಯಿಸುತ್ತಿದ್ದನಾ? ಎಂದು ತಿಳಿಯಲು ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!