ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಂಪಿ ಪ್ರವಾಸಕ್ಕೆ ಹೊರಟಿದ್ದ ಕಲಬುರಗಿಯ ಗುರುಮಿಟ್ಕಲ್‌ನ ಶಾಲಾ ಮಕ್ಕಳಿದ್ದ ಸಾರಿಗೆ ಬಸ್ ಗಂಗಾವತಿಯ ಮರಳಿ ಸಮೀಪ ರಸ್ತೆ ಬದಿಯ ಹೊಲಕ್ಕೆ ಉರುಳಿದೆ. ಇಂದು ಬೆಳಗ್ಗೆ 4:30ರ ಸುಮಾರಿಗೆ ಘಟನೆ ನಡೆದಿದೆ. ಅದೃಷ್ಟವಶಾತ್, ಬಸ್‌ನಲ್ಲಿದ್ದ 60 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ವಿದ್ಯಾರ್ಥಿಗೆ ಸಣ್ಣ ಪ್ರಮಾಣದ ಗಾಯವಾಗಿದೆ.
ಸಾರಿಗೆ ಇಲಾಖೆಯ ಗಂಗಾವತಿ ಘಟಕದ ವ್ಯವಸ್ಥಾಪಕ ರಾಜಶೇಖರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಿಗೆ ಪರ್ಯಾಯ ವಾಹನದ ವ್ಯವಸ್ಥೆ ಮಾಡಿದ್ದಾರೆ.
ಶಾಲಾ ಮಕ್ಕಳು ಬುಧವಾರ ರಾತ್ರಿ ಪ್ರವಾಸ ಹೊರಟಿದ್ದರು. ಬೆಳಗ್ಗೆ ಮರಳಿ ಸಮೀಪ ಪೇಪರ್ ಸಾಗಿಸುವ ವಾಹನ ರಸ್ತೆ ಮಧ್ಯೆ ಎದುರಾಗಿದೆ. ಚಾಲಕ ಸದಾಶಿವಯ್ಯ ಸಂಭಾವ್ಯ ಅಪಘಾತ ತಪ್ಪಿಸಲು ಹೋಗಿದ್ದರಿಂದ ನಿಯಂತ್ರಣ ಕಳೆದುಕೊಂಡ ಬಸ್ ಅಪಘಾತಕ್ಕೀಡಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.