ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತ್ರೆಯ ಸಂಭ್ರಮದಲ್ಲಿರುವ ದಕ್ಷಿಣ ಭಾರತದ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ತೆರಳುವ ಭಕ್ತಾದಿಗಳಿಗೆ ಉಚಿತ ಬಸ್ ಸೇವೆ ನೀಡುವ ಮೂಲಕ ಬಸ್ ಮಾಲಕರೋರ್ವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
‘ಗೋಲ್ಡನ್’ ಹೆಸರಿನ ಬಸ್‌ಗಳ ಮಾಲಕರಾಗಿರುವ ಶರೀಫ್ ಎಂಬವರು ಶನಿವಾರ ದಿನಪೂರ್ತಿ ತಮ್ಮ ಏಳೂ ಬಸ್‌ಗಳಲ್ಲಿ ಎಲ್ಲಾ ಪ್ರಯಾಣಿಕರಿಗೂ ಉಚಿತ ಪ್ರಯಾಣದ ಸೌಕರ್ಯವನ್ನು ಒದಗಿಸಿದ್ದಾರೆ.
ಪ್ರತೀ ಶುಕ್ರವಾರ ಕಟೀಲು ದೇವರಿಗೆ ಹೂವಿನ ಪೂಜೆಯ ಸೇವೆ ಮಾಡಿಸುವ ಶರೀಫ್ ಅವರು ಕಳೆದ ನವರಾತ್ರಿ ಜಾತ್ರೆಯ ಸಂದರ್ಭದಲ್ಲೂ ಕೂಡಾ ಕಟೀಲು ದೇವಳದ ಭಕ್ತರಿಗೆ ತಮ್ಮ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಒದಗಿಸಿದ್ದರು. ಜಾತ್ರೆಯ ಸಂದರ್ಭ ಭಕ್ತರಿಗೆ ಉಚಿತ ಪ್ರಯಾಣದ ಸೇವೆ ಒದಗಿಸಿದ ಶರೀಫ್ ಅವರನ್ನು ಶ್ರೀ ದೇವಳದ ಅರ್ಚಕರಾದ ಅನಂತ ಆಸ್ರಣ್ಣ ಅವರು ಅಭಿನಂದಿಸಿದರು. ಈ ಸಂದರ್ಭ ಮಾತನಾಡಿದ ಶರೀಫ್, ತಾನು ಚಿಕ್ಕಂದಿನಿಂದಲೂ ಕಟೀಲಿನ ಭಕ್ತ. ಕಟೀಲಮ್ಮನ ಸೇವೆ ಮಾಡಲು ಖುಷಿಯಾಗುತ್ತದೆ ಎಂದು ತಿಳಿಸಿದ್ದಾರೆ.