ಹೊಸದಿಗಂತ ವರದಿ ತುಮಕೂರು:
ದೇವಸ್ಥಾನಕ್ಕೆ ತೆರಳಲು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯರ ಮೇಲೆ ಬಸ್ ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ ಶೆಟ್ಟಿಹಳ್ಳಿ ಗ್ರಾಮದ ಆರು ಮಹಿಳೆಯರು ತುಮಕೂರಿನ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನಕ್ಕೆ ತೆರಳಲು ತುಮಕೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ನಿಲ್ದಾಣಕ್ಕೆ ಬಸ್ ಆಗಮಿಸಿದ್ದನ್ನು ಕಂಡು ಬಸ್ ಹತ್ತಲು ಮುಂದಾದಾಗ ಬಸ್ ಏಕಾಏಕಿ ಹಿಂಬದಿ ಚಲಿಸಿದ್ದು ಎರಡು ಬಸ್ ಗಳ ನಡುವೆ ಸಿಲುಕಿದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪುಟ್ಟತಾಯಮ್ಮ ಹಾಗೂ ಪಂಕಜ ಮೃತ ದುರ್ದೈವಿಗಳು.
ಇನ್ನು ಅವರ ಜೊತೆಯಲ್ಲಿದ್ದ ನಾಲ್ವರು ಮಹಿಳೆಯರಾದ ರೇಣುಕಾ, ಅನುಸೂಯ, ಪುಷ್ಪ ಹಾಗೂ ಮಂಜಮ್ಮ ಎಂಬುವವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಳಿಕ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತಪಟ್ಟ ಮಹಿಳೆಯರ ಶವಗಳನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.