ಅಂದು ಬಿಸಿನೆಸ್ ಜೀನಿಯಸ್, ಇಂದು 25 ವರ್ಷ ಜೈಲಿನಲ್ಲೇ ಕಾಲ ಕಳೆಯಬೇಕು: ಇದು ಕ್ರಿಪ್ಟೋ ಕಿಂಗ್ ನ ಸ್ಟೋರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಮೆರಿಕದ ಕ್ರಿಪ್ಟೋಕರೆನ್ಸಿ ಉದ್ಯಮದ ಪ್ರಮುಖ ವ್ಯಕ್ತಿ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್‌ಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಈತ ಕ್ರಿಪ್ಟೋಕರೆನ್ಸಿ ಡೆರಿವೇಟಿವ್‌ಗಳ ಎಕ್ಸ್‌ಚೇಂಜ್ ಎಫ್‌ಟಿಎಕ್ಸ್‌ನ ಸಂಸ್ಥಾಪಕ ಮತ್ತು ಸಿಇಓಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್ 8 ಬಿಲಿಯಲ್ ಡಾಲರ್ ಹಣಕಾಸು ವಂಚನೆಯ ಆರೋಪದ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದಾರೆ. ಇವರ ಮೇಲೆ ಇದ್ದ ಎಲ್ಲಾ ಎಂಟು ದೂರುಗಳಲ್ಲೂ ಆರೋಪ ಸಾಬೀತಾಗಿದೆ.

ತೀರ್ಪು ನೀಡಿದ ನ್ಯಾಯಾಧೀಶರು, ಎಸ್​ಬಿಎಫ್ ಅವರನ್ನು ಅಮೆರಿಕದ ಹಣಕಾಸು ಇತಿಹಾಸದಲ್ಲೇ ಅತಿದೊಡ್ಡ ವಂಚಕ ಎಂದು ಬಣ್ಣಿಸಿದ್ದಾರೆ.

ಅಮೆರಿಕದ ಸ್ಯಾಮ್ ಬ್ಯಾಂಕ್ಮನ್ ಫ್ರೈಡ್ 2019ರಲ್ಲಿ ಎಫ್​ಟಿಎಕ್ಸ್ ಎಂಬ ಕ್ರಿಪ್ಟೋಕರೆನ್ಸಿ ಎಕ್ಸ್​ಚೇಂಜ್ ಅನ್ನು ತೆರೆದಿದ್ದರು. ಆಗ ಕ್ರಿಪ್ಟೋಕರೆನ್ಸಿ ಬಹಳ ದೊಡ್ಡ ಭರವಸೆ ಹುಟ್ಟಿಸಿದ ಕ್ಷೇತ್ರ. ಕಡಿಮೆ ಶುಲ್ಕ ಹಾಗೂ ವೇಗದ ವಹಿವಾಟು ಇವೆರಡನ್ನೂ ಕೊಡುತ್ತಿದ್ದರಿಂದ ಎಫ್​ಟಿಎಕ್ಸ್ ಬಹಳ ವೇಗದಲ್ಲಿ ಬೆಳೆಯಿತು. ಬಹಳ ಬೇಗ ಇದು ವಿಶ್ವದ ಎರಡನೇ ಅತಿದೊಡ್ಡ ಕ್ರಿಪ್ಟೋ ಎಕ್ಸ್​ಚೇಂಜ್ ಎನಿಸಿತು.

ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್ ಅತಿಕಿರಿಯ ವಯಸ್ಸಿನ ಬಿಲಿಯನೇರ್ ಎನಿಸಿದರು. ಅವರ ಸಂಪತ್ತು ಮೌಲ್ಯ 26.5 ಬಿಲಿಯನ್ ಡಾಲರ್​ಗೆ ಹೋಯಿತು. ಬಿಂದಾಸ್ ಜೀವನಶೈಲಿಯ ಈತ ಒಂದು ರೀತಿಯಲ್ಲಿ ಕಲ್ಟ್ ಸ್ಟೇಟಸ್ ಗಿಟ್ಟಿಸಿದ್ದ. ವೈಯಕ್ತಿಕವಾಗಿ ಈತನಿಗೆ ಅಭಿಮಾನಿ ಬಳಗವೇ ಇತ್ತು. ಅಮೆರಿಕದ ಟಿವಿ ಶೋಗಳಲ್ಲಿ ದೊಡ್ಡ ದೊಡ್ಡ ಸೆಲಬ್ರಿಟಿ ಕಾರ್ಯಕ್ರಮಗಳಲ್ಲಿ ಈತ ಆಕರ್ಷಣೆಯಾಗಿದ್ದನು.

ಈತ ಎಫ್​ಟಿಎಕ್ಸ್ ಅಲ್ಲದೇ ಇನ್ನೂ ಹಲವು ಕಂಪನಿಗಳನ್ನು ಹೊಂದಿದ್ದರು. ಅದರಲ್ಲಿ ಅಲಮೇಡಾ ರಿಸರ್ಚ್ ಒಂದು. ಎಫ್​ಟಿಎಕ್ಸ್​ನಿಂದ ಹೊರಡಿಸಲಾಗಿದ್ದ ಎಫ್​ಟಿಟಿ ಎಂಬ ಕ್ರಿಪ್ಟೋ ಟೋಕನ್​ನಲ್ಲಿ ಅಲಮೇಡಾ ಕಂಪನಿ ಬಹಳ ದೊಡ್ಡ ಮೊತ್ತದ ಹೂಡಿಕೆ ಮಾಡಿತ್ತು. ಇದು ಹಿತಾಸಕ್ತಿ ಘರ್ಷಣೆಗೆ ಎಡೆ ಮಾಡಿಕೊಟ್ಟಿತು. ಇಲ್ಲಿಂದ ಎಫ್​ಟಿಎಕ್ಸ್​ನ ಪತನ ಆರಂಭವಾಗುತ್ತದೆ.

2022ರ ನವೆಂಬರ್ ತಿಂಗಳಲ್ಲಿ ಎದುರಾಳಿ ಕಂಪನಿಯ ಸಿಇಒವೊಬ್ಬರು ಎಫ್​ಟಿಎಕ್ಸ್​ನ ಹಣಕಾಸು ಸ್ಥಿತಿ ಬಗ್ಗೆ ಅನುಮಾನ ಮೂಡಿಸುವಂತೆ ಟ್ವೀಟ್ ಮಾಡುತ್ತಾರೆ. ಇದು ಬಹಳಷ್ಟು ಹೂಡಿಕೆದಾರರನ್ನು ಕಂಗಾಲಾಗಿಸುತ್ತದೆ. ಎಫ್​ಟಿಎಕ್ಸ್ ಎಕ್ಸ್​ಚೇಂಜ್​ನಲ್ಲಿ ತಾವಿರಿಸಿದ್ದ ಕ್ರಿಪ್ಟೋವನ್ನು ಹಿಂಪಡೆಯಲು ಎಲ್ಲರೂ ಮುಗಿಬೀಳುತ್ತಾರೆ. ಆದರೆ, ಅಷ್ಟು ಹೊರಹರಿವಿಗೆ ಸಾಕಾವಷ್ಟು ಫಂಡಿಂಗ್ ಎಫ್​ಟಿಎಕ್ಸ್​ನಲ್ಲಿ ಇರಲಿಲ್ಲ. ಆಗ ಎಫ್​ಟಿಎಕ್ಸ್​ನಿಂದ ಸಾಕಷ್ಟು ಮೊತ್ತದ ಹೂಡಿಕೆದಾರರ ಹಣ ನಾಪತ್ತೆಯಾಗಿರುವುದು ಬಹಿರಂಗವಾಗುತ್ತದೆ.ಸ್ಯಾಮ್ ಬ್ಯಾಂಕ್​ಮ್ಯಾನ್ ಫ್ರೈಡ್​ನನ್ನು ಬಹಾಮಾಸ್​ನಲ್ಲಿ ಬಂಧಿಸಲಾಗುತ್ತದೆ. ತನ್ನದೇನೂ ತಪ್ಪಿಲ್ಲ ಎಂದು ಈತ ಹೇಳಿಕೊಂಡರೂ ಎಂಟು ಸಂಗತಿಗಳಲ್ಲಿ ಇವರ ಮೇಲಿನ ಆರೋಪ ಕೋರ್ಟ್​ನಲ್ಲಿ ಸಾಬೀತಾಗಿದೆ. ಈಗ ಬರೋಬ್ಬರಿ 25 ವರ್ಷ ಜೈಲುಶಿಕ್ಷೆ ಅನುಭವಿಸುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!