ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಸಂಘರ್ಷ ತಾರಕದಲ್ಲಿರುವಾಗ ಇವತ್ತಿನ ಅಮೆರಿಕ ಅಧ್ಯಕ್ಷ ಬಿಡೆನ್ ಅವರ ಕುಟುಂಬದ ಉಕ್ರೇನ್ ಸಂಬಂಧಿ ಹಿತಾಸಕ್ತಿಯನ್ನು ಕೆದಕುವ ವಿದ್ಯಮಾನವೊಂದು ವರದಿಯಾಗುತ್ತಿದೆ. ಬಿಡೆನ್ ಅವರ ಎರಡನೇ ಮಗ ಹಂಟರ್ ಬಿಡೆನ್ ಅವರ ಬಿಸಿನೆಸ್ ಸಹವರ್ತಿಯೊಬ್ಬಗೆ ಅಮೆರಿಕ ನ್ಯಾಯಾಲಯದಿಂದ ವಂಚನೆ ಪ್ರಕರಣವೊಂದರಲ್ಲಿ ಶಿಕ್ಷೆಯಾಗಿದೆ.
ಈ ಪ್ರಕರಣಕ್ಕೂ ಉಕ್ರೇನಿಗೂ ನೇರಾನೇರ ಸಂಬಂಧವಿಲ್ಲ. ಆದರೆ ಶಿಕ್ಷೆಗೆ ಒಳಗಾಗಿರುವ ಡೆವೊನ್ ಅರ್ಚರ್ ಈ ಹಿಂದೆ ಉಕ್ರೇನಿನ ಗ್ಯಾಸ್ ಕಂಪನಿಯದ ನಿರ್ದೇಶಕರ ಬೋರ್ಡಿನಲ್ಲಿ ಬಿಡೆನ್ ಮಗ ಹಂಟರ್ ಬಿಡೆನ್ ಕೂರುವುದಕ್ಕೆ ಕಾರಣೀಕರ್ತರಾಗಿದ್ದರು.
ಅಮೆರಿಕನ್ ಬುಡಕಟ್ಟು ಜನಾಂಗದವರಿಗೆ ಸುಮಾರು 60 ಮಿಲಿಯನ್ ವಂಚನೆ ಮಾಡಿದ ಪ್ರಕರಣದಲ್ಲಿ ರಾಬರ್ಟ್ ಹಂಟರ್ ಬಿಡೆನ್‌ನ ಸ್ನೇಹಿತ ಡೆವೊನ್ ಆರ್ಚರ್‌ಗೆ ಒಂದು ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ ವಿಧಿಸಲಾಗಿದೆ. 15,700,513 ಡಾಲರ್‌ನ್ನು ಮುಟ್ಟುಗೋಲು ಹಾಕುವಂತೆ ಹಾಗೂ 43,427,436 ಡಾಲರ್ ಪಾವತಿಸುವಂತೆ ಕೋರ್ಟ್ ಆದೇಶ ನೀಡಿದೆ.
ಬಿಡೆನ್ ಮಗನ ಜತೆ ವ್ಯವಹಾರ ಕುದುರಿದ್ದೇ ಉಕ್ರೇನ್ ವಿಚಾರದಲ್ಲಾಗಿತ್ತು!
ರೋಸ್ಮಾಂಟ್ ಸೆನೆಕಾದಲ್ಲಿ ಇರುವ ಉಕ್ರೇನಿಯನ್ ಗ್ಯಾಸ್ ಕಂಪನಿ ಬುರಿಸ್ಮಾಗೆ ಆರ್ಚರ್, ಹಂಟರ್ ಬಿಡೆನ್ ಅವರನ್ನು ಪರಿಚಯಿಸಿದ್ದರು. ತದನಂತರ ಆರ್ಚರ್ ಹಾಗೂ ಬಿಡೆನ್ ಬುರಿಸ್ಮಾ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ತಿಂಗಳಿಗೆ $83,000ಕ್ಕಿಂತ ಹೆಚ್ಚು ಹಣ ಪಡೆಯುತ್ತಿದ್ದರು. ಇದೀಗ ವಿಧಿಸಿರುವ ಜೈಲು ಶಿಕ್ಷೆ ಉಕ್ರೇನಿಯನ್ ಗ್ಯಾಸ್ ಡೀಲ್‌ಗಳಿಗೆ ಸಂಬಂಧಿಸಿದ್ದಲ್ಲ. ಆದರೆ ಓಗ್ಲಾಲಾ ಸಿಯೋಕ್ಸ್ ಬುಡಕಟ್ಟು ಜನಾಂಗಕ್ಕೆ ಹತ್ತಾರು ಮಿಲಿಯನ್ ವಂಚಿಸುವ ಬಾಂಡ್ ಯೋಜನೆಯಲ್ಲಿ ಆರ್ಚರ್‌ನದ್ದು ಪ್ರಮುಖ ಪಾತ್ರವಿದೆ.
ಈ ಪ್ರಕರಣದಲ್ಲಿ ಬಿಡೆನ್ ಏನೂ ಸಿಲುಕಿಕೊಂಡಿಲ್ಲ. ಆದರೆ, ಅಮೆರಿಕವನ್ನು ನಂಬಿಕೊಂಡು ಉಕ್ರೇನ್ ರಷ್ಯಾವನ್ನು ಎದುರುಹಾಕಿಕೊಂಡು ಆಕ್ರಮಣ ಎದುರಿಸುತ್ತಿರುವ ಸಂದರ್ಭದಲ್ಲೇ ವರದಿಯಾಗಿರುವ ಈ ಸುದ್ದಿ ಬಿಡೆನ್ ಕುಟುಂಬದ ವ್ಯಾಪಾರಿ ಹಿತಾಸಕ್ತಿಯನ್ನೂ, ಉಕ್ರೇನಿನಲ್ಲಿ ಇರಬಹುದಾದ ವ್ಯಾಪಾರಿ ಆಯಾಮಗಳನ್ನೂ ಮತ್ತೊಮ್ಮೆ ಬೆಳಕಿಗೆ ತರುವುದಕ್ಕೆ ಆಸ್ಪದ ನೀಡಿದೆ.
ಹಾಗಂತ ಈ ಉಕ್ರೇನ್ ಆಯಾಮ ಹೊಸದೇನೂ ಅಲ್ಲ. ಈ ಹಿಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಹಲವು ಬಾರಿ ಪ್ರಶ್ನಿಸಿ ಬಿಡೆನ್ ಅನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕೆ ಪ್ರಯತ್ನಿಸಿದ್ದಾಗಿದೆ.