ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕೆಎಲ್ಇ ಸಂಸ್ಥೆಯ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯ ನನಗೆ ಶಿಕ್ಷಣ ಅಷ್ಟೇ ನೀಡಿಲ್ಲ. ಬದುಕುವುದು ಕಲಿಸಿಕೊಟ್ಟಿದೆ. ಆತ್ಮ ವಿಶ್ವಾಸ, ಚೈತನ್ಯ ನೀಡುವುದರ ಜೊತೆ ಜೀವನ ಪಥ ಬದಲಿಸಿದೆ ಎಂದು ಇನ್ಪೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿ ಹೇಳಿದರು.
ಶನಿವಾರ ಇಲ್ಲಿಯ ಕೆಎಲ್ಇ ಸಂಸ್ಥೆಯ ಬಿವಿಬಿ ಎಂಜಿನೀಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನ ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಬಿವಿಬಿ-ಕೆಎಲ್ಇ ಟೆಕ್ ಗ್ಲೋಬಲ್ ಅಲುಮ್ನಿ ಮಿಟ್ ಸಮ್ಮೇಳನವನ್ನು ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಯಾಗಿದ್ದ ನನಗೆ ಕಾಲೇಜಿನಲ್ಲಿ ನನಗೆ ಭೂಮರಡ್ಡಿ ಕಾಲೇಜಿನ ಹೇಮರೆಡ್ಡಿ ಮಲ್ಲಮ್ಮ ಎಂದು ಕರೆಯುತ್ತಿದ್ದರು. ನಿತ್ಯವೂ ಬಿಡವಿಲ್ಲದ ವಿವಿಧ ಚಟುವಟಿಕೆಯಲ್ಲಿ ತೊಡಗಿಗೊಳ್ಳುತ್ತಿದ್ದೇವು. ಆದರಿಂದ ಸಮಾಜದಲ್ಲಿ ಉನ್ನತ ಸ್ಥಾಕಕ್ಕೇರಲು ಸಾಧ್ಯವಾಗಿದೆ ಎಂದರು.
ಇಲ್ಲಿಯ ಶಿಕ್ಷಣ ಪಡೆದ ಅನೇಕರು ಸ್ವ ಉದ್ಯೋಗ ಆರಂಭಿಸಿ ಲಕ್ಷಾಂತರ ರೂ. ಗಳಿಸಿದ್ದಾರೆ. ಎಷ್ಟೋ ಜನರಿಗೆ ಉದ್ಯೋಗ ಒದಗಿಸಿದ್ದರೆ, ಕೆಲವರು ಕೈಗಾರಿಕೋದ್ಯಮಕ್ಕೆ ಕಾಲಿಟ್ಟು ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಬಿವಿಬಿ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಆದರೆ ಇಷ್ಟೇಲ್ಲಾ ಯಶಸ್ಸು ಕಂಡ ನಾವು ಸಂಸ್ಥೆಯ ಬೆಳವಣಿಗೆ ಬಗ್ಗೆ ಯೋಚಿಸಬೇಕಿದೆ. ಬದುಕು ಕಟ್ಟಿಕೊಟ್ಟ ಸಂಸ್ಥೆಗೆ ನಾವೇನೂ ಮಾಡಿದ್ದೇವೆ ಎಂದು ಪರಮಾರ್ಶೆ ಮಾಡಿಕೊಳ್ಳಬೇಕಿದೆ. ಸಂಸ್ಥೆ ನಮ್ಮಿಂದ ಏನನ್ನೂ ಕೇಳಿಲ್ಲ. ಆದರೂ ಕೃತಜ್ಞತೆ ಸಲ್ಲಿಸುವ ಜವಾಬ್ದಾರಿ ನಮ್ಮದಾಗಿದ್ದು, ಮನುಷ್ಯನಲ್ಲಿ ಉತ್ತಮ ಗುಣ ಕೃತಜ್ಞತೆ ಸಲ್ಲಿಸುವುದಾಗಿದೆ. ಈ ವಿಚಾರದಲ್ಲಿ ಹಳೇ ವಿದ್ಯಾರ್ಥಿಗಳು ಮಹತ್ವ ಪಾತ್ರವಹಿಸಬೇಕು. ಅಲ್ಲದೇ, ಕಲಿತ ಸಂಸ್ಥೆ ಏಳ್ಗೆಗೆ ನಮ್ಮದೇಯಾದ ಕೊಡುಗೆ ನೀಡುವತ್ತ ಎಲ್ಲರೂ ಯೋಚಿಸಬೇಕು ಎಂದರು.
ಕೆಎಲ್ಇ ಸಂಸ್ಥೆ ಸಪ್ತರ್ಷಿಗಳ ನಿಸ್ವಾರ್ಥ ಸೇವೆಯಿಂದ ಇದೀಗ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇದೀಗ ಡಾ. ಪ್ರಭಾಕರ ಕೋರೆ ದೂರದೃಷ್ಟಿ ಹಾಗೂ ನಿರಂತರ ಪರಿಶ್ರಮದಿಂದ ಹೆಮ್ಮರವಾಗಿ ಬೆಳೆದು ಸಹಸ್ರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಿದೆ ಎಂದರು.
ಕೈಗಾರಿಕೆ ಸಚಿವ ಮುರಗೇಶ ನಿರಾಣಿ ಮಾತನಾಡಿ, ಶಿಷ್ಯ ಗುರು ಮೀರಿಸುವಂತೆ, ಮಗ ತಂದೆ ಮೀರಿಸುವಂತೆ ಡಾ. ಪ್ರಭಾಕರ ಕೋರೆ ಅವರು ಕಠಿಣ ಶ್ರಮವಹಿಸಿ ಆಕಾಶದೆತ್ತರಕ್ಕೆ ಕೆಎಲ್ಇ ಸಂಸ್ಥೆಯನ್ನು ಬೆಳೆಸಿದ್ದಾರೆ. ೭೫ ವರ್ಷ ಪೂರೈಸಿದರೂ ೨೫ ವರ್ಷದ ಯುವಕನಂತೆ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಎಂದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಕುಲಪತಿ ಡಾ. ಅಶೋಕ ಶೆಟ್ಟರ್, ಕುಲಸಚಿವ ಬಸವರಾಜ ಅನಾಮಿ, ಡಾ. ಪ್ರಕಾಶ ತೇವರಿ ಇದ್ದರು.