ಬಿಜೆಪಿಗೆ ಬೈ ಆರ್‌ಜೆಡಿಗೆ ಹಾಯ್: ಇಂದು ಮತ್ತೆ‌ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ನಿತೀಶ್‌ ಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಿಜೆಪಿ ಮೈತ್ರಕೂಟದಿಂದ ಹೊರಬಂದು ನಿನ್ನೆ ಮದ್ಯಾಹ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಲಾಲೂಪ್ರಸಾದ್‌ ಯಾದವ್‌ ಅವರ ಪಕ್ಷ ಆರ್‌ಜೆಡಿಯೊಂದಿಗೆ ಕೈ ಮಿಲಾಯಿಸಿ ಮತ್ತೆ ಸರ್ಕಾರ ರಚಿಸಲು ಮುಂದಾಗಿದ್ದಾರೆ.

ಎನ್‌ಡಿಎ ಮೈತ್ರಿಕೂಟಕ್ಕೆ ಗುಡ್‌ ಬೈ ಹೇಳಿ ಮಹಾಘಟಬಂಧನ್‌ ಮೈತ್ರಿಕೂಟ ಸೇರಿಕೊಂಡಿರುವ ನಿತೀಶ್‌ ಕುಮಾರ್‌ ಇಂದು ಬಿಹಾರದ 8ನೇ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿತೀಶ್‌ ಕುಮಾರ್‌ ಅವರಿಗೆ ಪ್ರಸ್ತುತ ಏಳು ಪಕ್ಷಗಳು ಬೆಂಬಲ ನೀಡಿದ್ದು 164 ಶಾಸಕರು ಅವರಿಗೆ ತಮ್ಮ ಬೆಂಬಲ ನೀಡಿದ್ದಾರೆ.

ನಿತೀಶ್ ಕುಮಾರ್ ಅವರು ಬಿಜೆಪಿ ಅಥವಾ ಎನ್‌ಡಿಎ ಮೈತ್ರಿಕೂಟದಿಂದ ಹೊರಬರುತ್ತಿರುವುದು ಇದೇ ಮೊದಲೇನಲ್ಲ. 2013 ರಲ್ಲಿ ನರೇಂದ್ರ ಮೋದಿಯವರು ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಸಂದರ್ಭದಲ್ಲಿ ಇದೇ ರೀತಿ ಬಿಜೆಪಿ ಮೈತ್ರಿಕೂಟವನ್ನು ನಿತೀಶ್‌ ಕುಮಾರ್‌ ತ್ಯಜಿಸಿದ್ದರು. 2015 ರಲ್ಲಿ, ಕುಮಾರ್ ಅವರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್‌ನೊಂದಿಗೆ ‘ಮಹಾಘಟಬಂಧನ್’ (ಮಹಾ ಮೈತ್ರಿ) ರಚಿಸಿದರು. ತೇಜಸ್ವಿ ಯಾದವ್ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಕುರಿತು ಅವರು 2017 ರಲ್ಲಿ ಮಹಾಘಟಬಂಧನ್‌ನಿಂದ ದೂರವಾಗಿ ಮತ್ತೆ ಬಿಜೆಪಿಯೊಂದಿಗೆ ಕೈ ಜೋಡಿಸಿ ಮುಖ್ಯಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು.

ಪ್ರಸ್ತುತ ಮಹಾಘಟಬಂಧನ್‌ ಸರ್ಕಾರದಲ್ಲಿ ಆರ್‌ಜೆಡಿಯ ತೇಜಸ್ವಿ ಯಾದವ್‌ ಅವರು ಉಪಮುಖ್ಯಮಂತ್ರಿಯಾಗಲಿದ್ದು ಗೃಹಸಚಿವಾಲಯವನ್ನೂ ಯಾದವ್‌ ಕೇಳಿದ್ದಾರೆ ಎನ್ನಲಾಗುತ್ತಿದೆ. ವಿಧಾನಸಭೆಯ ಸ್ಪೀಕರ್‌ ಸ್ಥಾನವೂ ಆರ್‌ಜೆಡಿ ಪಕ್ಷದವರಿಗೆ ಸಿಗಲಿದ್ದು ಕಾಂಗ್ರೆಸ್‌ ಪಕ್ಷದವರಿಗೂ ಕೆಲ ಸಚಿವಾಲಯ ಹಂಚಿಕೆಯಾಗಲಿದೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!