ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‍ನ ಮೂರು ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಇಂದು ಅಧಿಕೃತ ಅಧಿಸೂಚನೆ ಹೊರಬೀಳಲಿದೆ. ಇಂದಿನಿಂದಲೇ ನಾಮಪತ್ರ ಪ್ರಕ್ರಿಯೆ ಆರಂಭವಾಗಲಿದ್ದು, ಜೂ.20ರ ವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ.
ವಿಧಾನಪರಿಷತ್ ಸದಸ್ಯರಾಗಿದ್ದ ಬಾಬುರಾವ್ ಚಿಂಚನಸೂರ್, ಆರ್.ಶಂಕರ್ ಹಾಗೂ ಲಕ್ಷ್ಮಣ ಸವದಿ ಅವರು ಮೇಲ್ಮನೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯಿಂದ ತೆರವಾಗಿರುವ 3 ಸ್ಥಾನಗಳಿಗೆ ಭಾರತೀಯ ಚುನಾವಣಾ ಆಯೋಗ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ.
ವಿಧಾನಪರಿಷತ್‍ನ ಉಪಚುನಾವಣೆಯ ಚುನಾವಣಾ ಅಧಿಕಾರಿಯಾಗಿ ವಿಧಾನಸಭೆ ಕಾರ್ಯದರ್ಶಿ ಕಾರ್ಯ ನಿರ್ವಹಿಸಲಿದ್ದಾರೆ. ಜೂ.21ರಂದು ಸಲ್ಲಿಕೆಯಾಗಿರುವವ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.23ರ ವರೆಗೂ ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶವಿದೆ. ಅಗತ್ಯ ಬಿದ್ದರೆ ಜೂ.30 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆಸಿ, ಸಂಜೆ 5 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಒಂದೇ ದಿನ ಮೂರು ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆ ನಡೆಯಲಿದೆ.