ಹೊಸದಿಗಂತ ವರದಿ,ಅಂಕೋಲಾ:
ತಾಲೂಕಿನ ಕೆಳಗಿನ ಮಂಜಗುಣಿಯ ಬಂದರು ವಿಸ್ತರಣೆ ಮತ್ತು ಹಿನ್ನೀರು ತಡೆಗೋಡೆ ನಿರ್ಮಿಸಿ ಇಲ್ಲಿಯ ಮೀನುಗಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಸ್ಥಳೀಯ ಪ್ರಮುಖರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ೩೦ ಕ್ಕೂ ಅಧಿಕ ಬೋಟ್ಗಳಿದ್ದು, ಬೇಲೆಕೇರಿ, ಮುದಗಾ, ಕಾರವಾರ, ತದಡಿ ಸೇರಿದಂತೆ ಇನ್ನಿತರ ಬಂದರುಗಳನ್ನೇ ಅವಲಂಬಿಸಬೇಕಾಗಿದೆ. ನಮ್ಮ ಗ್ರಾಮದಲ್ಲಿರುವ ಚಿಕ್ಕ ಮೀನುಗಾರಿಕಾ ಬಂದರು ಕೇವಲ ೨ ಬೋಟ್ ನಿಲುಗಡೆಗೆ ಮಾತ್ರ ಸೀಮಿತವಾಗಿದೆ. ಬಂದರು ಪ್ರದೇಶದ ಒಳಗಡೆ ವಾಹನ ಹೋಗುವ ವ್ಯವಸ್ಥೆ ಇಲ್ಲದಿರುವುದರಿಂದ ಕೂಲಿಗಳನ್ನೇ ಅವಲಂಬಿಸಬೇಕಾಗಿದೆ. ಒಂದೊಮ್ಮೆ ಅವರು ಸಿಗದಿದ್ದರೆ ತೀರಾ ಸಂಕಷ್ಟಕ್ಕೆ ಸಿಲುಕುತ್ತೇವೆ. ಗಂಗಾವಳಿ ನದಿ ಸಂಗಮ ಪ್ರದೇಶವಾಗಿರುವುದರಿಂದ ನೀರಿನ ಒತ್ತಡವನ್ನು ತಡೆಯಲು ಹಿನ್ನೀರು ತಡೆಗೋಡೆ ನಿರ್ಮಿಸಿದರೆ ಸ್ಥಳೀಯ ಬೋಟ್ಗಳು ಇಲ್ಲಿಯೇ ತಮ್ಮ ವ್ಯಾಪಾರ-ವಹಿವಾಟು ಮಾಡಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಸಚಿವ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಕುರಿತು ಪರಿಶೀಲನೆ ನಡೆಸಿ ಬಂದರು ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಮೀನುಗಾರರ ಪ್ರಮುಖರಾದ ಪ್ರಕಾಶ ನರಸಿಂಹ ತಾಂಡೇಲ, ರಾಮಚಂದ್ರ ತಾಂಡೇಲ, ಸಾಯಿನಾಥ ಎಂ. ತಾಂಡೇಲ, ಸಂತೋಷ ಎಸ್. ತಾಂಡೇಲ, ದತ್ತಾ ಎನ್. ತಾಂಡೇಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.