ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಕ್ಕೆ ಅಮಿತ್ ಶಾ ಬಂದ ಬೆನ್ನಲ್ಲೇ ಮತ್ತೆ ರಾಜಕೀಯ ಚಟುವಟಿಕೆ ಬಿರುಸಿನಿಂದ ಸಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಸಂಪುಟ ವಿಸ್ತರಣೆ ಕುರಿತ ಚರ್ಚೆ ಮುನ್ನೆಲೆ ಬಂದಿದೆ.
ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆಮತ್ತೊಮ್ಮೆ ಹೊಸ ಭರವಸೆಯೊಂದಿಗೆ ದೆಹಲಿ ವಿಮಾನ ಏರುತ್ತಿದ್ದಾರೆ ಸಿಎಂ.
ನಾಳೆ ಬೆಳಗ್ಗೆ 11.30ಕ್ಕೆ ದೆಹಲಿಗೆ ತೆರಳಲಿರುವ ಸಿಎಂ, ಸಂಜೆ 4.30ಕ್ಕೆ ‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಡಿದ್ದು ಬೆಳಗ್ಗೆಯಿಂದ ಸಂಜೆಯವರೆಗೂ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲಿರುವ ಸಿಎಂ ಭಾನುವಾರ ರಾತ್ರಿ 11.30 ರ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಈ ಸಮಯದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಪಾಲ್ಗೊಳ್ಳಲಿರುವ ಹಿನ್ನೆಲೆ ವರಿಷ್ಠರ ಜೊತೆ ಮುಖ್ಯಮಂತ್ರಿ ಮಾತುಕತೆ ನಡೆಸಲಿದ್ದಾರೆ. ಇದಕ್ಕಾಗಿ ಜೆ.ಪಿ.ನಡ್ಡಾ, ಅಮಿತ್ ಶಾ ಅವರ ಸಮಯಾವಕಾಶ ಕೋರಿದ್ದಾರೆ.
ಒಂದು ವೇಳೆ ಅವಕಾಶ ಸಿಕ್ಕಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ವಿಚಾರ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆಯೂ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಐದಾರು ಬಾರಿ ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಿದರೂ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿಲ್ಲ. ಈ ಬಾರಿ ಸಿಗುತ್ತಾ ಕಾದುನೋಡಬೇಕಾಗಿದೆ.