ಧಾರಾಕಾರ ಮಳೆ: ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು, ಗುರುವಾರ ಸಂಜೆಯಿಂದ ನಿರಂತರ ಮಳೆಯಾಗುತ್ತಿದ್ದು, ಶನಿವಾರ ಮುಂಜಾನೆಯವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಅದರಲ್ಲೂ ಮಡಿಕೇರಿ ಹಾಗೂ ಸಂಪಾಜೆ ಹೋಬಳಿಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಯಸ್ವಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇತ್ತ ತಲಕಾವೇರಿ-ಭಾಗಮಂಡಲ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.
ಶುಕ್ರವಾರ ಬೆಳಗಿನಿಂದ ಭಾಗಮಂಡಲ- ನಾಪೋಕ್ಲು ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ತ್ರಿವೇಣಿ ಸಂಗಮದ ಸ್ನಾನಘಟ್ಟ ಮುಳುಗಡೆಯಾಗಿದೆ.
ಜಾನುವಾರುಗಳಿಗೆ ಆಹಾರದ ಕೊರತೆ: ಕೊಡಗಿನ ಗಡಿಭಾಗವಾದ ಚೆಂಬು ಗ್ರಾಮದಲ್ಲ ಕಳೆದ ಮೂರು ದಿನಗಳಿಂದ ಬಿಡುವು ನೀಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದಲ್ಲಿ ಜಾನುವಾರುಗಳಿಗೆ ಆಹಾರದ ಕೊರತೆ ಎದುರಾಗಿದೆ‌. ರೈತರು ಮನೆಯಿಂದ ಹೊರಬಾರದಷ್ಟು ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಜಿಲ್ಲಾಡಳಿತದಿಂದ ಜಾನುವಾರುಗಳಿಗೆ ಮೇವು ಒದಗಿಸುವ ಕಾರ್ಯ ಆರಂಭಗೊಂಡಿದೆ.
ಮತ್ತೊಂದೆಡೆ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಮುಂಜಾಗ್ರತಾ ಕ್ರಮವಾಗಿ ಮೂರು ಕುಟುಂಬಗಳ 7ಮಂದಿಯನ್ನು ಊರುಬೈಲು ಶಾಲೆಯಲ್ಲಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ರೆಡ್ ಅಲರ್ಟ್ ಘೋಷಣೆ: ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನಿಂದ ಗಾಳಿಯೂ ಬಿರುಸಿನಿಂದ ಬೀಸುತ್ತಿದ್ದು, ಶನಿವಾರ ಮುಂಜಾನೆಯವರೆಗೆ ರೆಡ್ ಅಲರ್ಟ್ ಘೋಷಣೆಯಾಗುವುದರೊಂದಿಗೆ ಭಾರೀ ಮಳೆಯ ಮುನ್ನಚ್ಚರಿಕೆ ನೀಡಲಾಗಿದೆ.
ಕಳೆದ 24ಗಂಟೆಗಳಲ್ಲಿ ಮಡಿಕೇರಿ ತಾಲೂಕಿನ ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 15 ಸೆಂ.ಮೀನಷ್ಟು ಭಾರೀ ಮಳೆಯಾಗಿದ್ದರೆ, ಭಾಗಮಂಡಲ, ಗಾಳಿಬೀಡಿನಲ್ಲಿ ತಲಾ 12, ಶೆಟ್ಟಿಗೇರಿಯಲ್ಲಿ 8, ಬಿಟ್ಟಂಗಾಲದಲ್ಲಿ 7 ಸೆಂ.ಮೀ.ನಷ್ಟು ಮಳೆ ಸುರಿದಿದೆ‌.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!