ಶಿರೂರು ಏತ ನೀರಾವರಿ ಯೋಜನೆಗೆ ಸಂಪುಟ ಸಭೆ ಅಸ್ತು: ಗೋವಿಂದ ಕಾರಜೋಳ

ಹೊಸದಿಗಂತ ವರದಿ ಬಾಗಲಕೋಟೆ:
ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಘಟಪ್ರಭಾ ಬಲದಂಡೆ ಕಾಲುವೆ ಕಿ.ಮೀ.182.560 ರಿಂದ 199.093 ವರೆಗಿನ ಸುಮಾರು 10224.57 ಹೆಕ್ಟೇರ್ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಶಿರೂರು ಏತ ನೀರಾವರಿ ಯೋಜನೆಯ ರೂ.243.00 ಕೋಟಿ ಮೊತ್ತದ ಕಾಮಗಾರಿಯನ್ನು 2 ಹಂತಗಳಲ್ಲಿ ಕೈಗೊಳ್ಳುವ ವಿವರವಾದ ಯೋಜನಾ ವರದಿಗೆ ಇಂದು ನಡೆದ ಸಭೆಯಲ್ಲಿ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು,  ಘಟಪ್ರಭಾ ಬಲದಂಡೆ ಕಾಲುವೆಯು 199.093 ಕಿ.ಮೀ. ಉದ್ದವಿದ್ದು, ಡಿಸ್ಚಾರ್ಜ್ 66.56 ಕ್ಯೂಮೆಕ್ಸ್ ಮೂಲಕ 1,69,129 ಹೆಕ್ಟೇರ್ ನೀರಾವರಿ ಅಚ್ಚುಕಟ್ಟು ಪ್ರದೇಶ ಹೊಂದಿರುತ್ತದೆ ಎಂದು ವರದಿ ಮಾಡಲಾಗಿದೆ. ಆದರೆ 2004ರಲ್ಲಿ ಘಟಪ್ರಭಾ ಬಲದಂಡೆ ಕಾಲುವೆಯ ನಿರ್ಮಾಣದ ನಂತರ ಘಟಪ್ರಭಾ ಬಲದಂಡೆ ಕಾಲುವೆಯ 148.00 ಕಿ.ಮೀ. ನಂತರದ ಪ್ರದೇಶಕ್ಕೆ ನೀರು ಹರಿಯುತ್ತಿಲ್ಲವಾದ್ದರಿಂದ ಆ ಪ್ರದೇಶಗಳು ಒಣ ಪ್ರದೇಶವಾಗಿದ್ದು, ಇದರಿಂದ ಈ ಪ್ರದೇಶಗಳನ್ನು ನೀರಾವರಿ ವಂಚಿತ ಪ್ರದೇಶವನ್ನಾಗಿ ಪರಿಗಣಿಸಲಾಗಿದೆ. ಘಟಪ್ರಭಾ ಬಲದಂಡೆ ಕಾಲುವೆಯ ಕಿ.ಮೀ. 182.560 ರಿಂದ 199.093ವರೆಗಿನ ಸುಮಾರು 10,224.57 ಹೆಕ್ಟೇರ್ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸಲು ಪರ್ಯಾಯ ವ್ಯವಸ್ಥೆಯಾಗಿ ಶಿರೂರು ಏತ ನೀರಾವರಿ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು ಘಟಪ್ರಭಾ ಬಲದಂಡೆ ಕಾಲುವೆಯು ಕೇವಲ 2000 ಕ್ಯೂಸೆಕ್ಸ್ ಹರಿವನ್ನು ಮಾತ್ರ ತೆಗೆದುಕೊಳ್ಳುವ ಸಾಮರ್ಥ್ಯವಿದ್ದು, ಕಾಲುವೆಯ ಮೇಲ್ಭಾಗದಲ್ಲಿ ವಿನ್ಯಾಸಿಸಿರುವಂತೆ 2100 ಕ್ಯೂಸೆಕ್ಸ್ ಬದಲು 2000 ಕ್ಯೂಸೆಕ್ಸ್ ಮಾತ್ರ ಬಿಡಲಾಗುತ್ತಿದೆ ಮತ್ತು ಕಾಲುವೆಯ ಮೇಲ್ಭಾಗದ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು (cash crops) ಬೆಳೆಯಲಾಗುತ್ತಿದ್ದು, ಇದರಿಂದಾಗಿ ಯೋಜಿತ ಬಳಕೆಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಕಾಲುವೆ ಮೇಲ್ಭಾಗದಲ್ಲಿ ಬಳಸಲಾಗುತ್ತಿರುವುದರಿಂದ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣಗೊಂಡಾಗಿನಿಂದ ಕಿ.ಮೀ. 148.00ರ ನಂತರದ ಪ್ರದೇಶಕ್ಕೆ ಸಾಕಷ್ಟು ಪ್ರಮಾಣದ ನೀರು ಹರಿಯುತ್ತಿಲ್ಲವೆಂಬ ಅಂಶಗಳನ್ನು ಅಧ್ಯಯನದ ಮೂಲಕ ಪರಿಗಣಿಸಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಕಾರ್ಯಸಾಧುವೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ

ಈ ಯೋಜನೆಯ ಜಾರಿಯಿಂದ 10224.57 ಹೆಕ್ಟೇರ್ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ಬಾಗಲಕೋಟೆ ವಿತರಣಾ ಕಾಲುವೆಯಿಂದ ಇಂಗಳಗಿ ವಿತರಣಾ ಕಾಲುವೆವರೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ಬಾಗಲಕೋಟೆ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಹತ್ತಿರ ಶಿರೂರು ಏತ ನೀರಾವರಿ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಈ ಯೋಜನೆಯನ್ನು ಸಚಿವ ಸಂಪುಟ ಅನುಮೋದಿಸಿದೆ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!