ಹೊಸದಿಗಂತ ವರದಿ, ಕಲಬುರಗಿ:
ಕಲ್ಯಾಣ ಕರ್ನಾಟಕದ ಭಾಗವಾದ ಕಲಬುರಗಿಯಲ್ಲಿ ನಾಳೆ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದ್ದು, ಈ ಭಾಗದ ಅಭಿವೃದ್ಧಿಗಾಗಿ ಪೂರಕ ಚರ್ಚೆ ಹಾಗೂ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗಾಗಿ ಆಯವ್ಯಯಯದಲ್ಲಿ ರೂಪಿಸಲಾಗಿರುವ ಯೋಜನೆಗಳು ಹಾಗೂ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಜನರಿಗೆ ಉದ್ಯೋಗಾವಕಾಶಗಳ ಬಗ್ಗೆ ಹಾಗೂ ಪ್ರತ್ಯೇಕ ಸಚಿವಾಲಯ ರಚನೆ ಬಗ್ಗೆಯೂ ಚರ್ಚಿಸಲಾಗುವುದು. ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ಪರವಾಗಿದೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ಅನುದಾನ:
ನಮ್ಮ ಸರ್ಕಾರದ ಮೇಲೆ ಕಲ್ಯಾಣ ಕರ್ನಾಟಕ ಭಾಗದ ಜನರ ನಿರೀಕ್ಷೆಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,ಬಡವರ ಪರವಾದ ಸರ್ಕಾರ ನಮ್ಮದು. ಆದ್ದರಿಂದ ಈ ಭಾಗದ ಅಭಿವೃದ್ಧಿಗಾಗಿ 5000 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದರು.
ನಾಗಮಂಗಲ ಪ್ರಕರಣ ಸಂಬಂಧಪಟ್ಟ ಪೋಲೀಸ್ ಅಧಿಕಾರಿಗಳ ಅಮಾನತು
ಮಂಡ್ಯ ಜಿಲ್ಲೆಯ ನಾಗಮಂಗಲದ ಗಲಭೆ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾಗಮಂಗಲ ಶಾಂತವಾಗಿದೆ. ಗಲಭೆ ಪ್ರಕರಣಕ್ಕೆ ಪೋಲೀಸರ ಕರ್ತವ್ಯ ವೈಫಲ್ಯವೇ ಕಾರಣವೆಂದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಸಂಬಂಧಪಟ್ಟ ಉಪ ಪೋಲೀಸ್ ವರಷ್ಠಾಧಿಕಾರಿ ಹಾಗೂ ಇನ್ಸ್ ಪೆಕ್ಟರ್ ನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಹಾನಿಗೊಳಗಾದ ಅಂಗಡಿ ಮುಂಗಟ್ಟ, ವಾಹನಗಳಿಗೆ ಪರಿಹಾರ ನೀಡುವವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.