Friday, February 23, 2024

ಹಣಕ್ಕೆ ಬೇಡಿಕೆ ಇಟ್ಟು ಶಾಸಕ ಬೋಪಯ್ಯಗೆ ಕರೆ: ಬೆಂಗಳೂರಿನಲ್ಲಿ ತುಮಕೂರಿನ ವ್ಯಕ್ತಿ ಸೆರೆ

ದಿಗಂತ ವರದಿ ಮಡಿಕೇರಿ:

ಭ್ರಷ್ಟಾಚಾರ ನಿಗ್ರಹ ದಳದ (ಎ.ಸಿ.ಬಿ) ಅಧಿಕಾರಿ ಹೆಸರಿನಲ್ಲಿ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಕರೆ ಮಾಡಿ ಒಂದು ಕೋಟಿ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ನಿವಾಸಿ, ರೌಡಿಶೀಟರ್ ಆನಂದ್ (31)ಬಂಧಿತ ಆರೋಪಿ.
ಜ.5ರ ಸಂಜೆ ವೇಳೆ ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ “ತಾವು ಎ.ಸಿ.ಬಿ.ಯವರು, ತಮ್ಮ ಮೇಲೆ ಎ‌.ಸಿ.ಬಿ ದಾಳಿ ನಡೆಸಲು ಸಜ್ಜಾಗುತ್ತಿದ್ದು, ದಾಳಿಯನ್ನು‌ ತಡೆ ಹಿಡಿಯಲು ಒಂದು ಕೋಟಿ ರೂ ನೀಡಬೇಕು” ಎಂದು ಬೇಡಿಕೆ ಇಟ್ಟಿದ್ದನೆನ್ನಲಾಗಿದೆ. ಅಲ್ಲದೆ ಎರಡನೇ ಬಾರಿಗೆ ಮತ್ತೊಂದು ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ಈ ಬಗ್ಗೆ ಯಾವ ತೀರ್ಮಾನ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದಲ್ಲದೆ, ತಾನು ನೀಡುವ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವಂತೆ ತಿಳಿಸಿದ್ದನೆನ್ನಲಾಗಿದೆ. ಇದಕ್ಕೆ ಉತ್ತರಿಸಿದ ಬೋಪಯ್ಯ, ತಾನು ಎಸಿಬಿ ತನಿಖೆ‌ ಎದುರಿಸಲು ಸಿದ್ಧವಿರುವುದಾಗಿ ತಿಳಿಸಿದಾಗ ಆತ ಕರೆ ಸ್ಥಗಿತಗೊಳಿಸಿದ್ದ.
ತಕ್ಷಣವೇ ಈ ಕುರಿತು ದೂರವಾಣಿ ಮೂಲಕ ಪೊಲೀಸ್ ಮಹಾ ನಿರ್ದೇಶಕರಿಗೆ ಮಾಹಿತಿ ನೀಡಿದ್ದ ಬೋಪಯ್ಯ ಮರುದಿನ ಮಡಿಕೇರಿ ನಗತ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮೊಬೈಲ್ ಸಂಖ್ಯೆಯ ಜಾಡು ಬೆನ್ನು ಹತ್ತಿದ ಪೊಲೀಸರಿಗೆ, ಝಹೀಬ್ ಎಂಬಾತನಿಗೆ ಸೇರಿದ ಸಿಮ್’ನಿಂದ ಆಂಧ್ರಪ್ರದೇಶದಿಂದ ಈ ಕರೆ ಬಂದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು.
ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು,ಆಂಧ್ರಪ್ರದೇಶದವರೆಗೂ ತೆರಳಿ, ಬಳಿಕ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು, ಸಿದ್ಧಾಪುರ ಠಾಣಾಧಿಕಾರಿ ಮೋಹನ್ ರಾಜ್ ಅವರ ನೇತೃತ್ವದಲ್ಲಿ ಒಂದು ಪ್ರತ್ಯೇಕ ತಂಡ ರಚಿಸಿದ್ದರು.
ಮಡಿಕೇರಿ ಡಿ.ವೈ.ಎಸ್.ಪಿ ಗಜೇಂದ್ರ ಪ್ರಸಾದ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ‌ ಹಾಗೂ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್, ಕಾನ್ಸ್‌ಟೇಬಲ್ ವಸಂತ್, ಮಡಿಕೇರಿಯ ನಾಗರಾಜ್, ನಂದಕುಮಾರ್ ಭಾಗಿಯಾಗಿದ್ದರು.
ತನಿಖಾ ತಂಡಕ್ಕೆ ಆಂಧ್ರದ ಗಡಿಭಾಗದಲ್ಲಿ ಆರೋಪಿಯ ಫೋನ್ ಲೊಕೇಶನ್ ಪತ್ತೆಯಾಗಿತ್ತು. ಅದರಂತೆ ಆಂಧ್ರಕ್ಕೆ ಪೊಲೀಸರು ತೆರಳಿದಾಗ ಆತ ಬೆಂಗಳೂರಿಗೆ ವಾಪಾಸಾಗಿರುವುದು ದೃಢಪಟ್ಟಿತ್ತು. ಬುಧವಾರ ಮಧ್ಯಾಹ್ನ ಆರೋಪಿಯನ್ನು ಬೆಂಗಳೂರು ರೈಲ್ವೇ ನಿಲ್ದಾಣದ ಬಳಿ ಪೊಲೀಸರು ವಶಕ್ಕೆ ಪಡೆದು ಮಡಿಕೇರಿಗೆ ಕರೆತಂದಿದ್ದಾರೆ.
ವೃತ್ತಿಯಲ್ಲಿ ಚಾಲಕನಾಗಿರುವ ಈತನ ವಿರುದ್ಧ ತುಮಕೂರು ಮಾತ್ರವಲ್ಲದೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲೂ ಪ್ರಕರಣಗಳು ಇರುವುದಾಗಿ ಹೇಳಲಾಗಿದ್ದು, ಕೊಲೆ, ಸುಲಿಗೆ ಸರಿದಂತೆ ಹಲವು ಪ್ರಕರಣಗಳಲ್ಲಿ ಈಗಾಲೇ ಜೈಲು ಶಿಕ್ಷೆಗೂ ಗುರಿಯಾಗಿದ್ದನೆಂದು ಹೇಳಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!