ಇಂದಿನ ಮಕ್ಕಳ ಜೀವನಶೈಲಿ ವೇಗವಾಗಿ ಬದಲಾಗುತ್ತಿದೆ. ಆಟದ ಮೈದಾನಕ್ಕಿಂತ ಮೊಬೈಲ್ ಸ್ಕ್ರೀನ್ ಹೆಚ್ಚು ಆಕರ್ಷಕವಾಗಿದೆ. ಮನೆಯ ಊಟಕ್ಕಿಂತ ಬಿಸ್ಕೀಟ್, ಚಾಕಲೇಟ್, ಜಂಕ್‌ಫುಡ್‌ಗಳು ಸುಲಭ ಆಯ್ಕೆಯಾಗಿದೆ. ಇದರ ನಡುವೆ, ಇನ್ನೊಂದು ಗಂಭೀರವಾದ ವಿಷಯ ಎಂದರೆ ಐದು, ಆರು ವರ್ಷ ಆಗುವಷ್ಟರಲ್ಲಿ ಮಕ್ಕಳಿಗೆ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಬೆಳೆಸುವುದು. ಪಾಲಕರು ತಾವು ಕುಡಿಯುವಾಗ “ಸ್ವಲ್ಪ ಮಾತ್ರ” ಎಂದು ಕೊಡುವುದೇ ಮುಂದೆ ದಿನನಿತ್ಯದ ಅಭ್ಯಾಸವಾಗುತ್ತದೆ. ಆದರೆ ಇದು ಎಷ್ಟು ಸುರಕ್ಷಿತ ಎಂಬುದನ್ನು ಹೆಚ್ಚಿನವರು ಯೋಚಿಸುವುದೇ ಇಲ್ಲ. ಮಕ್ಕಳು ಟೀ, ಕಾಫಿ ಕುಡಿಯೋದ್ರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ ಅನ್ನೋದು ನೋಡೋಣ.
- ಮೆದುಳಿನ ಮೇಲೆ ಅತಿಯಾದ ಪ್ರಚೋದನೆ: ಟೀ–ಕಾಫಿಯಲ್ಲಿರುವ ಕೆಫೀನ್ ಮಕ್ಕಳ ಬೆಳೆಯುತ್ತಿರುವ ನರವ್ಯವಸ್ಥೆಗೆ ಹಾನಿಕಾರಕ. ಇದರಿಂದ ವ್ಯಾಕುಲತೆ, ಆತಂಕ ಮತ್ತು ಏಕಾಗ್ರತೆಯ ಕೊರತೆ ಉಂಟಾಗಬಹುದು.
- ನಿದ್ದೆ ಸಮಸ್ಯೆ: ಸ್ವಲ್ಪ ಪ್ರಮಾಣದ ಕೆಫೀನ್ ಕೂಡ ಮಕ್ಕಳ ನಿದ್ದೆಯನ್ನು ಹಾಳುಮಾಡುತ್ತದೆ. ನಿದ್ರಾಭಂಗದಿಂದ ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ.
- ಪೋಷಕಾಂಶ ಹೀರಿಕೊಳ್ಳುವಿಕೆಗೆ ಅಡ್ಡಿ: ಚಹಾದಲ್ಲಿರುವ ಟ್ಯಾನಿನ್‌ಗಳು ಕಬ್ಬಿಣ ಸೇರಿದಂತೆ ಅಗತ್ಯ ಪೋಷಕಾಂಶಗಳ ಶೋಷಣೆಯನ್ನು ತಡೆಯುತ್ತವೆ. ಇದರಿಂದ ರಕ್ತಹೀನತೆಯ ಅಪಾಯ ಹೆಚ್ಚುತ್ತದೆ.
- ಹಲ್ಲು ಮತ್ತು ತೂಕ ಸಮಸ್ಯೆ: ಸಕ್ಕರೆಯುಕ್ತ ಟೀ–ಕಾಫಿ ಹಲ್ಲುಗಳಲ್ಲಿ ಕಲೆ, ಹಲ್ಲು ಹಾಳಾಗುವಿಕೆ ಮತ್ತು ಅನಗತ್ಯ ಕ್ಯಾಲೋರಿಗಳ ಸೇರ್ಪಡೆಗೆ ಕಾರಣವಾಗುತ್ತದೆ.
- ಅಡಿಕ್ಷನ್ ಆಗುವ ಸಾಧ್ಯತೆ: ಒಮ್ಮೆ ಅಭ್ಯಾಸವಾದರೆ ಮಕ್ಕಳು ಪ್ರತಿದಿನವೂ ಹಠ ಹಿಡಿಯುತ್ತಾರೆ. ಇದು ಆರೋಗ್ಯಕರ ಆಹಾರದಿಂದ ದೂರ ಮಾಡುತ್ತದೆ.

