ಹೊಸದಿಗಂತ ಡಿಜಿಟಲ್ ಡೆಸ್ಕ್:
1985ರಲ್ಲಿ ನಡೆದ ಭೀಕರ ಏರ್ ಇಂಡಿಯಾ ಫ್ಲೈಟ್ 182 (ಕನಿಷ್ಕ) ಬಾಂಬ್ ಸ್ಫೋಟದ ಹಿಂದೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರ ಕೈವಾಡವಿತ್ತು ಎಂಬುದನ್ನು ಕೆನಡಾದ ಗುಪ್ತಚರ ಸಂಸ್ಥೆ ‘ಸಿಎಸ್ಐಎಸ್’ (CSIS) ಇದೇ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ. ಸುಮಾರು ನಲವತ್ತು ವರ್ಷಗಳ ನಂತರ ಕೆನಡಾ ಈ ಐತಿಹಾಸಿಕ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
ಖಲಿಸ್ತಾನಿ ಉಗ್ರರ ಹೇಯ ಕೃತ್ಯ
ಇದನ್ನು ಅತ್ಯಂತ “ಹೇಯ ಭಯೋತ್ಪಾದನಾ ಕೃತ್ಯ” ಎಂದು ಕರೆದಿರುವ ಸಿಎಸ್ಐಎಸ್, ಕೆನಡಾದ ನೆಲದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದ ಖಲಿಸ್ತಾನಿ ಉಗ್ರರು ಇರಿಸಿದ್ದ ಬಾಂಬ್‌ನಿಂದಾಗಿ ವಿಮಾನವು ಪತನಗೊಂಡಿತು ಎಂದು ಸ್ಪಷ್ಟಪಡಿಸಿದೆ.
ಸಂತ್ರಸ್ತರ ಸ್ಮರಣೆ ಹಾಗೂ ಅಧಿಕೃತ ಹೇಳಿಕೆ
ಭಯೋತ್ಪಾದನೆ ಸಂತ್ರಸ್ತರ ರಾಷ್ಟ್ರೀಯ ಸ್ಮರಣ ದಿನದ ಅಂಗವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸ್ಥೆಯು, “ಜೂನ್ 23, 1985 ರಂದು ನಡೆದ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ 329 ಅಮಾಯಕರನ್ನು ನಾವು ಸ್ಮರಿಸುತ್ತೇವೆ. ಉಗ್ರರು ಇಟ್ಟಿದ್ದ ಬಾಂಬ್ ಇಡೀ ವಿಮಾನವನ್ನು ಧ್ವಂಸಗೊಳಿಸಿತು. ಮೃತರಾದವರಲ್ಲಿ ಹೆಚ್ಚಿನವರು ಕೆನಡಾದ ಪ್ರಜೆಗಳೇ ಆಗಿದ್ದರು” ಎಂದು ಉಲ್ಲೇಖಿಸಿದೆ.
ರಾಷ್ಟ್ರೀಯ ಭದ್ರತೆಗೆ ತಿರುವು ನೀಡಿದ ಕ್ಷಣ
ಇದು ಕೆನಡಾದ ಇತಿಹಾಸದಲ್ಲೇ ಅತ್ಯಂತ ಭೀಕರ ಮತ್ತು ಕರಾಳ ಭಯೋತ್ಪಾದಕ ದಾಳಿಯಾಗಿದೆ. ಈ ಘಟನೆಯು ಕೆನಡಾದ ರಾಷ್ಟ್ರೀಯ ಭದ್ರತಾ ಸಮುದಾಯದ ಕಾರ್ಯವೈಖರಿಗೆ ಒಂದು ಪ್ರಮುಖ ತಿರುವು ನೀಡಿದ ಕ್ಷಣವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಭಾರತ ಮತ್ತು ಕೆನಡಾ ರಾಜತಾಂತ್ರಿಕ ಸಂಘರ್ಷದ ನಡುವೆ ಕೆನಡಾ ಸಂಸ್ಥೆಯ ಈ ವರದಿ ಭಾರೀ ಮಹತ್ವ ಪಡೆದುಕೊಂಡಿದೆ.



