ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಭಾರತ ಸರ್ಕಾರದ ಏಜೆಂಟ್‌ಗಳೇ ಹತ್ಯೆ ಮಾಡಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಕ್ಕೆ ಭಾರತ ತಿರುಗೇಟು ನೀಡಿದ್ದು, ಯಾವುದೇ ಸೂಕ್ತ ಸಾಕ್ಷ್ಯಾಧಾರ ನೀಡಿಲ್ಲ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ.
ವಿದೇಶಾಂಗ ಇಲಾಖೆ ವಕ್ತಾರ ಅದಿಂದಮ್ ಬಾಗ್ಚಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನಿಜ್ಜರ್ ಹತ್ಯೆ ಕುರಿತಾಗಿ ಕೆನಡಾ ಸರ್ಕಾರವು ಭಾರತಕ್ಕೆ ಯಾವುದೇ ನಿರ್ದಿಷ್ಟ ಮಾಹಿತಿ ನೀಡಿಲ್ಲ. ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರೂಡೊ ಹೇಳಿಕೆ ಕೇವಲ ರಾಜಕೀಯ ಪ್ರೇರಿತ ಎಂದು ಅರಿಂದಮ್ ಬಾಗ್ಚಿ ಚಾಟಿ ಬೀಸಿದರು.
ಭಾರತದಲ್ಲಿ ಅಪರಾಧ ಚಟುವಟಿಕೆ ನಡೆಸಿ ಕೆನಡಾದಲ್ಲಿ ನೆಲೆಸಿರುವ ಅಪರಾಧಿಗಳ ಬಗ್ಗೆ ನಾವು ಸಮಗ್ರ ಮಾಹಿತಿ ನೀಡಿದ್ದೇವೆ. ಇಷ್ಟಾದರೂ ಕೆನಡಾ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರಿಂದಮ್ ಬಾಗ್ಚಿ ಸ್ಪಷ್ಟಪಡಿಸಿದರು.
ಕೆನಡಾ ದೇಶವು ಉಗ್ರರಿಗೆ ಸ್ವರ್ಗದಂಥಾ ನೆಲೆಯಾಗಿ ಪರಿವರ್ತನೆಗೊಂಡಿದೆ. ಭಯೋತ್ಪಾದನೆಯನ್ನು ಕೆನಡಾ ದೇಶ ವಿಶಾಲ ದೃಷ್ಟಿಕೋನದಿಂದ ನೋಡಬೇಕಿದೆ. ಭಾರತ ಸರ್ಕಾರದ ಪರವಾಗಿ ಕೆನಡಾದಲ್ಲಿ ಇರುವ ಭಾರತೀಯರ ಸುರಕ್ಷತೆಗೆ ನಾವು ಸೂಕ್ತ ಕ್ರಮ ವಹಿಸಿದ್ದೇವೆ ಎಂದು ಅರಿಂದಮ್ ಬಾಗ್ಚಿ ತಿಳಿಸಿದರು.
ಖಲಿಸ್ತಾನ್ ಉಗ್ರರ ದಾಳಿ ಭೀತಿ ಸೇರಿದಂತೆ ಭಾರತೀಯ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಕೆನಡಾಗೆ ತೆರಳಲು ವೀಸಾ ನೀಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದೇವೆ ಎಂದೂ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.