ಲಿವ್ ಇನ್ ರಿಲೇಶನ್​ಶಿಪ್​ನಲ್ಲಿ ವಿಚ್ಛೇದನ ಕೋರುವಂತಿಲ್ಲ: ಕೇರಳ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅದೇನೆಂದರೆ ಲಿವ್ ಇನ್ ರಿಲೇಶನ್​ಶಿಪ್​ನಲ್ಲಿ ವಾಸಿಸುತ್ತಿರುವ ಜೋಡಿಯು ನ್ಯಾಯಾಲಯದಲ್ಲಿ ವಿಚ್ಛೇದನ ಕೋರುವಂತಿಲ್ಲ ಎಂದು ಹೇಳಿದೆ.

ಇಬ್ಬರು ವ್ಯಕ್ತಿಗಳು ಯಾವುದೇ ಕಾನೂನು ಅಥವಾ ವಿಶೇಷ ವಿವಾಹ ಕಾಯ್ದೆಯ ಅನುಸಾರ ವಿವಾಹವಾಗದೆ, ಕೇವಲ ಒಪ್ಪಂದದ ಆಧಾರದ ಮೇಲೆ ಒಟ್ಟಿಗೆ ವಾಸಿಸಲು ನಿರ್ಧರಿಸಿದಾಗ ಅದು ಮದುವೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ವಿಚ್ಛೇದನ ಕೇಳುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಕಾನೂನಿನಲ್ಲಿ ಈವರೆಗೂ ಲಿವ್ ಇನ್ ಸಂಬಂಧವನ್ನು ಮದುವೆ ಎಂದು ಗುರುತಿಸಿಲ್ಲ. ವಿಶೇಷ ವಿವಾಹ ಕಾಯಿದೆಯಂತಹ ಜಾತ್ಯತೀತ ಕಾನೂನಿಗೆ ಅನುಸಾರವಾಗಿ ವಿವಾಹವನ್ನು ನಡೆಸಿದರೆ ಮಾತ್ರ ಅದಕ್ಕೆ ಕಾನೂನು ತನ್ನ ಮಾನ್ಯತೆ ನೀಡುತ್ತದೆ. ಪರಸ್ಪರ ಒಪ್ಪಂದವೊಂದರ ಮೂಲಕ ವ್ಯಕ್ತಿಗಳು ಒಟ್ಟಿಗೆ ಬದುಕಲು ನಿರ್ಧರಿಸಿದರೆ ಅದನ್ನು ಮದುವೆ ಎಂದು ಹೇಳಲು ಮತ್ತು ಅದರ ಮೇಲೆ ವಿಚ್ಛೇದನವನ್ನು ಪಡೆಯಲು ಅವರು ಅರ್ಹರಾಗುವುದಿಲ್ಲ ಎಂದು ಹೈಕೋರ್ಟ್​ನ ವಿಭಾಗೀಯ ಪೀಠ ತಿಳಿಸಿದೆ.

ಕಾನೂನುಬದ್ಧ ವಿವಾಹವನ್ನು ಬೇರ್ಪಡಿಸುವ ಸಾಧನವಾಗಿದ್ದು, ಕಾನೂನು ವಿಚ್ಛೇದನ. ಸಂಬಂಧವು ಪರಸ್ಪರ ಕಟ್ಟುಪಾಡುಗಳು ಅಥವಾ ಕರ್ತವ್ಯಗಳ ರಚನೆಗೆ ಅರ್ಹತೆ ಪಡೆಯುವ ಪರಿಸ್ಥಿತಿ ಇರಬಹುದು. ಆದರೆ ಅಂಥ ಸಂಬಂಧವನ್ನು ವಿಚ್ಛೇದನದ ಉದ್ದೇಶಕ್ಕಾಗಿ ಗುರುತಿಸಬಹುದು ಎಂಬುದು ಅದರ ಅರ್ಥವಲ್ಲ ಎಂದು ನ್ಯಾಯಾಲಯ ಹೇಳಿತು.

ವಿಶೇಷ ವಿವಾಹ ಕಾಯ್ದೆಯಡಿ ವಿಚ್ಛೇದನ ನೀಡಲು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಲಿವ್-ಇನ್-ರಿಲೇಶನ್‌ಶಿಪ್‌ನಲ್ಲಿರುವ ಜೋಡಿಯು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಈ ತೀರ್ಪು ನೀಡಿದೆ.

ಫೆಬ್ರವರಿ 2006ರಲ್ಲಿ ಅರ್ಜಿದಾರ ಜೋಡಿಗಳಾದ ಒಬ್ಬರು ಹಿಂದೂ ಮತ್ತು ಇನ್ನೊಬ್ಬರು ಕ್ರಿಶ್ಚಿಯನ್ ಜೋಡಿ ನೋಂದಾಯಿತ ಒಪ್ಪಂದ ಮಡಿಕೊಂಡು ಒಟ್ಟಿಗೆ ವಾಸಿಸಲು ನಿರ್ದರಿಸಿದರು. ಜೊತೆಗೆ ಮಗುವನ್ನು ಹೊಂದಿದ್ದಾರೆ.

ಇದೀಗ ಇಬ್ಬರೂ ಬೇರ್ಪಡಲು ಬಯಸಿದ್ದರಿಂದ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಪರಸ್ಪರ ವಿಚ್ಛೇದನಕ್ಕಾಗಿ ಜಂಟಿ ಅರ್ಜಿಯೊಂದಿಗೆ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.ಆದರೆ ಕೌಟುಂಬಿಕ ನ್ಯಾಯಾಲಯವು ವಿಶೇಷ ವಿವಾಹ ಕಾಯಿದೆಯಡಿ ಅವರು ಮದುವೆಯಾಗಿಲ್ಲ ಎಂಬ ಅಂಶವನ್ನು ಗಮನಿಸಿ ವಿಚ್ಛೇದನ ನೀಡಲು ನಿರಾಕರಿಸಿತು.

ಕೌಟುಂಬಿಕ ನ್ಯಾಯಾಲಯವು ವಿಚ್ಛೇದನದ ಅರ್ಜಿಯನ್ನು ಪರಿಗಣಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಗಮನಿಸಿದ ಹೈಕೋರ್ಟ್, ಕೂಡ ಅರ್ಜಿಯನ್ನು ಹಿಂತಿರುಗಿಸುವಂತೆ ಸೂಚಿಸಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!