ಹರಿಯಾಣ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕಾಂಗ್ರೆಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್​ ಮಂಗಳವಾರ ಹೇಳಿದೆ.

ಇಂದು ಬೆಳಗ್ಗೆಯೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಕಾಂಗ್ರೆಸ್​, ಹರಿಯಾಣ ಚುನಾವಣೆಯ ಫಲಿತಾಂಶಗಳನ್ನು ಅಪ್​ಡೇಟ್​ ಮಾಡುವಲ್ಲಿ ನಿಧಾನ ಮಾಡಲಾಗುತ್ತಿದೆ ಎಂದು ದೂರಿತ್ತು. ಆದರೆ, ಈ ಆರೋಪವನ್ನು ಚುನಾವಣಾ ಆಯೋಗ ತಿರಸ್ಕರಿಸಿ, ಪ್ರತಿ ಐದು ನಿಮಿಷಗಳಿಗೊಮ್ಮೆ ಎಲ್ಲ ಕ್ಷೇತ್ರಗಳಲ್ಲಿ ಸುಮಾರು 25 ಸುತ್ತುಗಳ ಅಪ್​​ಡೇಟ್​ ನೀಡಲಾಗುತ್ತಿದೆ ಎಂದು ಹೇಳಿದೆ.

ಇಂದು ಸಂಜೆ 5 ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್​​ ರಮೇಶ್, ಹರಿಯಾಣದಲ್ಲಿ ಫಲಿತಾಂಶಗಳು ಸಂಪೂರ್ಣವಾಗಿ ಅನಿರೀಕ್ಷಿತ ಹಾಗೂ ಆಶ್ಚರ್ಯಕರವಾಗಿದೆ. ಅಲ್ಲದೆ, ಇದು ವಾಸ್ತವಕ್ಕೆ ವಿರುದ್ಧವಾಗಿದೆ ಮತ್ತು ಹರಿಯಾಣದ ಜನರು ಮನಸ್ಸು ಮಾಡಿದ್ದಕ್ಕೆ ವಿರುದ್ಧವಾಗಿದೆ. ಹರಿಯಾಣದಲ್ಲಿ ಕಂಡುಬಂದಿರುವ ಫಲಿತಾಂಶಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಜನರ ಇಚ್ಛೆಯನ್ನು ಬುಡಮೇಲು ಮಾಡಿದ ವಿಜಯವಾಗಿದೆ. ಪಾರದರ್ಶಕ, ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಸೋಲಾಗಿದೆ. ಹರಿಯಾಣದ ಅಧ್ಯಾಯವು ಪೂರ್ಣಗೊಂಡಿಲ್ಲ ಎಂದು ಹೇಳಿದರು.

ಮಧ್ಯಾಹ್ನದವರೆಗೆ ನಾನು ಚುನಾವಣಾ ಆಯೋಗದೊಂದಿಗೆ ಸಂಪರ್ಕದಲ್ಲಿದ್ದೆ. ಅವರು ನನ್ನ ಎಲ್ಲ ದೂರುಗಳಿಗೆ ಉತ್ತರಿಸಿದ್ದಾರೆ ಮತ್ತು ಅವರ ಉತ್ತರಕ್ಕೆ ನಾನು ಪ್ರತಿ ಉತ್ತರವನ್ನು ನೀಡಿದ್ದೇನೆ. ಎಣಿಕೆ ಪ್ರಕ್ರಿಯೆ, ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆಯ ಬಗ್ಗೆ ನಮಗೆ ಅತ್ಯಂತ ಗಂಭೀರವಾದ ದೂರುಗಳು ಬಂದಿವೆ. ಎಲ್ಲ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇಂದು ಅಥವಾ ಮರುದಿನ ಇದನ್ನು ಚುನಾವಣಾ ಆಯೋಗಕ್ಕೆ ಪ್ರಸ್ತುತಪಡಿಸುತ್ತೇವೆ ಎಂದು ಜೈರಾಮ್​ ರಮೇಶ್​ ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!