ಹೊಸದಿಗಂತ ವರದಿ, ಕಾರವಾರ :
ಸಂಸದನಾಗಿ ಅದಿಕಾರಕ್ಕೇರಿದ ನೂರೇ ದಿನದಲ್ಲಿ ರೈಲ್ವೆ ಸೇವೆಗಳಲ್ಲಿ ಕ್ರಾಂತಿಕಾರಿ ಕೆಲಸ ಮಾಡುತ್ತಿರುವ ಉಡುಪಿ ಸಂಸದರ ದಕ್ಷತೆಗೆ ಮತ್ತೊಂದು ಗರಿ ಲಭಿಸಿದ್ದು, ಕರಾವಳಿ ಮತ್ತು ತಿರುಪತಿ ನಡುವೆ ರೈಲು ಸಂಪರ್ಕದ ದಶಕಗಳ ಕನಸು ಈಡೇರಿದೆ.
ತಿರುಪತಿಯ ಜತೆಗೆ ಹೈದರಾಬಾದ್ ನಗರಕ್ಕೂ ರೈಲು ಸಂಪರ್ಕ ಲಭಿಸಿದ್ದು, ಕಾಚಿಗುಡ ಮಂಗಳೂರು ವಾರಕ್ಕೆರಡು ದಿನದ ರೈಲನ್ನು ಮುರುಡೇಶ್ವರಕ್ಕೆ ವಿಸ್ತರಣೆ ಮಾಡಿ ಭಾರತೀಯ ರೈಲ್ವೇ ಆದೇಶ ಮಾಡಿದೆ.
ಕರಾವಳಿಯಿಂದ ತಿರುಪತಿ ಹೈದರಾಬಾದ್ ರೈಲು ಬೇಕು ಎಂಬ ಬೇಡಿಕೆಯನ್ನು ಕಳೆದ ಕೆಲವು ವರ್ಷಗಳಿಂದ ಕೇಳುತಿದ್ದ ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ಈ ಬಾರಿ ಸ್ಪಷ್ಟ ಬೇಡಿಕೆ ಇಟ್ಟಿತ್ತು.
ಈ ವಿಷಯ ತಿಳಿದ ಉತ್ತರ ಕನ್ನಡ ರೈಲ್ವೇ ಸಮಿತಿಯು ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಸಂಪರ್ಕಿಸಿ ಯಾವುದೇ ಹೊಸ ರೈಲುಗಳು ಆರಂಭವಾಗುವುದಿದ್ದರೂ ಅದು ಉತ್ತರ ಕನ್ನಡಕ್ಕೂ ಲಭಿಸುವಂತೆ ಮಾಡಲು ಮನವಿ ಮಾಡಿತ್ತು.
ಈ ಬೇಡಿಕೆಗೆ ಕ್ಷಿಪ್ರವಾಗಿ ಸ್ಪಂದಿಸಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ,ತಾನು ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ ಜಿಲ್ಲೆಗೂ ಈ ಸೇವೆ ಸಿಗಬೇಕು ಎಂದು ತಕ್ಷಣವೇ ರೈಲ್ವೆ ಸಚಿವರಿಗೆ ಪತ್ರ ಬರೆದದ್ದು ಮಾತ್ರವಲ್ಲದೇ , ರೈಲ್ವೇ ಮಂಡಳಿ ದೆಹಲಿಗೂ ತೆರಳಿ ಪ್ರಯತ್ನ ಪಟ್ಟಿದ್ದರು.
ಸಂಸದರ ಮನವಿಯನ್ನು ಪರಿಗಣಿಸಿದ ರೈಲ್ವೇ ಸಚಿವಾಲಯ ಕುಂದಾಪುರದಿಂದ ಮುಂದುವರಿಸಿ ಇದೀಗ ಕಾಚಿಗುಡ ಮಂಗಳೂರು ರೈಲನ್ನು ಉಡುಪಿ ಮೂಲಕ ಮುರುಡೇಶ್ವರಕ್ಕೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಸಂಜೆ ನಾಲ್ಕು ಘಂಟೆಗೆ ಮುರುಡೇಶ್ವರ ಬಿಡುವ ರೈಲು ವಾರಕ್ಕೆರಡು ವಾರಿ ಬುದುವಾರ ಮತ್ತು ಶನಿವಾರ ಮಂಗಳೂರು ಕೊಯಂಬತ್ತೂರು ಮೂಲಕ ತಿರುಪತಿ ಸಮೀಪದ ರೆಣಿಗುಂಟಕ್ಕೆ ಮರುದಿನ ಬೆಳಿಗ್ಗೆ 11 ಕ್ಕೆ ತಲುಪಲಿದ್ದು,ಅಲ್ಲಿಂದ ಹೈದರಾಬಾದಿಗೆ ಪ್ರಯಾಣ ಮುಂದುವರಿಸಲಿದೆ.
ಮತ್ತೆ ಶುಕ್ರವಾರ ಹಾಗು ಮಂಗಳವಾರ ಸಂಜೆ 5 ಕ್ಕೆ ರೇಣಿಗುಂಟ ಬರುವ ರೈಲು ಅಲ್ಕಿಂದ ಮರುದಿನ ಮದ್ಯಾಹ್ನ ಎರಡಕ್ಕೆ ಮುರುಡೇಶ್ವರಕ್ಕೆ ಬರಲಿದೆ.