ಹೊಸದಿಗಂತ ವರದಿ,ಮಂಡ್ಯ :
ರಸ್ತೆ ಬದಿ ಕೆಟ್ಟುನಿಂತಿದ್ದ ಗೂಡ್ಸ್ ಕ್ಯಾಂಟರ್ ದುರಸ್ತಿ ಮಾಡುತ್ತಿದ್ದ ಚಾಲಕನಿಗೆ ಮತ್ತೊಂದು ಕ್ಯಾಂಟರ್ ಡಿಕ್ಕಿ ಹೊಡೆದು ಆತ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಕೆಸ್ತೂರಿನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಮೂಲತಃ ಆಂಧ್ರಪ್ರದೇಶದ ಹಿಂದೂಪುರ ಟೌನ್‌ನ ವಾಸಿಯಾಗಿದ್ದು, ಹಾಲಿ ಬೆಂಗಳೂರಿನ ಖಾಜಿಮೊಹಲ್ಲಾ ಸ್ಟ್ರೀಟ್‌ನಲ್ಲಿ ವಾಸವಾಗಿರುವ ಮೆಹಬೂಬ್‌ಪಾಷ (48) ಮೃತಪಟ್ಟ ಕ್ಯಾಂಟರ್ ಚಾಲಕ.
ಮದ್ದೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಕೆಸ್ತೂರು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಮೆಹಬೂಬ್ ಚಾಲನೆ ಮಾಡುತ್ತಿದ್ದ ಗೂಡ್ಸ್ ಕ್ಯಾಂಟರ್ ರಸ್ತೆ ಬದಿ ಕೆಟ್ಟುನಿಂತಿತ್ತು. ಈ ವೇಳೆ ಮದ್ದೂರು ಮಾರ್ಗವಾಗಿ ತೆರಳುತ್ತಿದ್ದ ಮತ್ತೊಂದು ಗೂಡ್ಸ್ ಲಾರಿಯನ್ನು ಚಾಲನೆಗೊಳಿಸಲು ತಳ್ಳುವಂತೆ ಚಾಲಕ ಮೆಹಬೂಬ್‌ಪಾಷ ಮನವಿ ಮಾಡಿದ್ದಾನೆ. ಈ ವೇಳೆ ಎರಡು ಕ್ಯಾಂಟರ್‌ಗಳ ಮಧ್ಯ ಕುಳಿತಿದ್ದ ಮೆಹಬೂಬ್‌ಪಾಷ ಧಾರುಣವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಈ ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.