ಕುಸಿದ ಟೀಮ್ ಇಂಡಿಯಾಕ್ಕೆ ಹೆಗಲು ಕೊಟ್ಟ ನಾಯಕ: ಇಂಗ್ಲೆಂಡ್‌ ಗೆಲುವಿಗೆ ಸಾಧಾರಣ ಗುರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌‌ 

ಹಾಲಿ ಚಾಂಪಿಯನ್ ಇಂಗ್ಲೆಂಡ್‌ ವಿರುದ್ಧ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 229 ರನ್ ಬಾರಿಸಿದ್ದು,ಗೆಲುವಿಗೆ ಸಾಧಾರಣ ಗುರಿ ನೀಡಿದೆ.

ಅಗ್ರಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ನಾಯಕ ರೋಹಿತ್ ಶರ್ಮಾ(87) ಹಾಗೂ ಸೂರ್ಯಕುಮಾರ್ ಯಾದವ್(47) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ನೆರವಾದರು.

ಏಕನಾ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. 40 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳಾದ ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಪೆವಿಲಿಯನ್ ಸೇರಿದರು.

ಕೇವಲ 40 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ 4ನೇ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್ ಆಸರೆಯಾದರು. ಆರಂಭದಲ್ಲಿ ಎಚ್ಚರಿಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಲೀಲಾಜಾಲವಾಗಿ ರನ್ ಗಳಿಸಲಾರಂಭಿಸಿದರು. ಈ ಜೋಡಿ 111 ಎಸೆತಗಳನ್ನು ಎದುರಿಸಿ 91 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 58 ಎಸೆತಗಳನ್ನು ಎದುರಿಸಿ 39 ರನ್ ಗಳಿಸಿದ್ದ ಕೆ ಎಲ್ ರಾಹುಲ್‌, ವಿಲ್ಲಿ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಬೇರ್‌ಸ್ಟೋವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನಾಯಕನಾಗಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ರೋಹಿತ್ ಶರ್ಮಾ 66 ಎಸೆತಗಳನ್ನು ಎದುರಿಸಿ ಏಕದಿನ ಕ್ರಿಕೆಟ್ ವೃತ್ತಿಜೀವನದ 54ನೇ ಅರ್ಧಶತಕ ಬಾರಿಸಿದರು. ಇದರ ಜತೆಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 12ನೇ ಬಾರಿಗೆ 50+ ರನ್ ಬಾರಿಸಿದ ಸಾಧನೆ ಮಾಡಿದರು. ಇನ್ನು ಇದೇ ಇನಿಂಗ್ಸ್‌ ಮೂಲಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18000+ ರನ್ ಬಾರಿಸಿದ ಸಾಧನೆಯನ್ನು ಮಾಡಿದರು. ಅಂತಿಮವಾಗಿ ರೋಹಿತ್ ಶರ್ಮಾ 101 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 87 ರನ್ ಬಾರಿಸಿ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು.

ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ರವೀಂದ್ರ ಜಡೇಜಾ ಕೂಡಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ಶಮಿ ಕೂಡಾ ಕೇವಲ 1 ರನ್ ಗಳಿಸಿ ಮಾರ್ಕ್‌ ವುಡ್‌ಗೆ ವಿಕೆಟ್ ಒಪ್ಪಿಸಿದರು. ಇದರ ನಡುವೆ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ ತಂಡದ ಮೊತ್ತವನ್ನು ಇನ್ನೂರರ ಗಡಿ ಡಾಟಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಸೂರ್ಯಕುಮಾರ್ ಯಾದವ್ 47 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 49 ರನ್‌ ಬಾರಿಸಿ ಡೇವಿಡ್‌ ವಿಲ್ಲಿಗೆ ಮೂರನೇ ಬಲಿಯಾದರು.

ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ 21 ರನ್‌ಗಳ ಅಮೂಲ್ಯ ಜತೆಯಾಟ ನಿಭಾಯಿಸಿದರು. ಬುಮ್ರಾ 16 ರನ್ ಬಾರಿಸಿ ಕೊನೆಯ ಎಸೆತದಲ್ಲಿ ರನೌಟ್ ಆದರೆ, ಕುಲ್ದೀಪ್ ಯಾದವ್ 9 ರನ್ ಗಳಿಸಿ ಅಜೇಯರಾಗುಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!