ಹೊಸದಿಗಂತ ವರದಿ,ಹಲಗೂರು:
ಸಮೀಪದ ಬಾಣಸಮುದ್ರ ಬಳಿ ಇರುವ ಅಕ್ವೇರಲ್ ಗಾರ್ಮೆಂಟ್ಸ್ ಬಳಿ ಕಾರು ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಹಲಗೂರಿನ ಮುಸ್ಲಿಂ ಬ್ಲಾಕ್ ನಿವಾಸಿ ಚಾಂದ್ ಪಾಷಾ ಅವರ ಪುತ್ರ ಮೊಹಮದ್ ಅರ್ಬಾಜ್ (20) ಮೃತ ಯುವಕ.
ಕಾರ್ಯ ನಿಮಿತ್ತ ಮಳವಳ್ಳಿಗೆ ತೆರಳಿ ಹಲಗೂರಿಗೆ ಹಿಂದುರುಗುತ್ತಿದ್ದಾಗ ಅಕ್ವೇರಲ್ ಗಾರ್ಮೆಂಟ್ಸ್ ಬಳಿ ಹಲಗೂರು ಕಡೆಯಿಂದ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಮೊಹಮದ್ ಕೈಪ್ ತೀವ್ರ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಿಂಬದಿ ಸವಾರ ಮೊಹಮದ್ ಅರ್ಬಾಜ್ ನನ್ನು ಮಳವಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ತುರ್ತು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟನು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.