ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರುಕಟ್ಟೆಯೊಂದರಲ್ಲಿ ಕಾರ್ ಬಾಂಬ್ ಸ್ಫೋಟಗೊಂಡಿದ್ದು, ಏಳು ಮಂದಿ ಸಾವನ್ನಪ್ಪಿ, 30 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಸಿರಿಯಾದ ಅಜಾಜ್ ನಗರದಲ್ಲಿ ನಡೆದಿದೆ.
ಅಜಾಜ್ ನಗರ ಮಾರುಕಟ್ಟೆ ಎಂದಿನಂತೆ ಜನರಿಂದ ತುಂಬಿತ್ತು. ರಂಜಾನ್ ವೇಳೆ ಉಪವಾಸ ನಿರತರು ಮಾರುಕಟ್ಟೆಗೆ ಶಾಪಿಂಗ್ ಮಾಡಲು ಬರುತ್ತಿದ್ದಾಗ ಈ ಬಾಂಬ್ ಸ್ಫೋಟಗೊಂಡಿದೆ. ಕಾರಿನೊಳಗಿದ್ದ ಬಾಂಬ್ ಸ್ಫೋಟಗೊಂಡು ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಮಾಹಿತಿ ಪಡೆದ ಪೊಲೀಸರು ಅಪಘಾತದ ಸ್ಥಳಕ್ಕೆ ಧಾವಿಸಿದ್ದು, ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಘಟನೆ ಹಿಂದೆ ಯಾರಿದ್ದಾರೆ ಎಂಬುದು ಇನ್ನು ತಿಳಿದು ಬಂದಿಲ್ಲ. ಟರ್ಕಿಯ ಗಡಿಯ ಸಮೀಪದ ಹಾಗೂ ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದ ಅಜಾಜ್‌ನಲ್ಲಿ ಭಯ ಹುಟ್ಟಿಸಲು ಈ ಹಿಂಸಾಚಾರ ನಡೆಸಲಾಗಿದೆ ಎಂದು ಹೇಳಲಾಗಿದೆ.