ಹೊಸದಿಗಂತ ವರದಿ, ಮಡಿಕೇರಿ:
ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ವಾಹನ ಡಿಕ್ಕಿಪಡಿಸಿ ಪರಾರಿಯಾಗಿದ್ದ ಬಂಟ್ವಾಳ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುನ್ನೂರು ಗ್ರಾಮ ನಂದವಾರಕೋಟೆ ನಿವಾಸಿಯಾದ ನಝೀರ್ (27) ಬಂಧಿತ ಆರೋಪಿಯಾಗಿದ್ದು, ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್’ಟೇಬಲ್ ಎ.ಜಿ.ಸಂಜು ಎಂಬವರು ಕಳೆದ ಭಾನುವಾರ ಪೂರ್ವಾಹ್ನ 11ಗಂಟೆ ಸುಮಾರಿಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕರ್ತವ್ಯದಲ್ಲಿದ್ದಾಗ ಮಂಗಳೂರು ರಸ್ತೆಯ ಪೆಟ್ರೋಲ್ ಬಂಕ್ ಬಳಿ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ವಾಹನ ದಟ್ಟಣೆ ಹೆಚ್ಚಾಗಿತ್ತೆನ್ನಲಾಗಿದೆ.
ಈ ಸಂದರ್ಭ ಸ್ಥಳಕ್ಕೆ ತೆರಳಿದ ಸಂಜು ಅವರು ಡಿಕ್ಕಿಪಡಿಸಿದ ವಾಹನ ಸಂಖ್ಯೆ ಕೆಎ-70 ಎಂ-4709 ವಾಹನದ ಚಾಲಕನಿಗೆ ವಾಹನವನ್ನು ರಸ್ತೆಯಿಂದ ಸಲ್ಪ ಪಕ್ಕಕ್ಕೆ ನಿಲ್ಲಿಸುವಂತೆ ತಿಳಿಸಿದ್ದಾರೆ. ಆದರೆ ಆ ವಾಹನದ ಚಾಲಕನು ‘ನನ್ನ ಕಾರನ್ನು ತಡೆಯಲು ನೀನು ಯಾರು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಏಕಾಏಕಿ ಕಾರನ್ನು ಮುಂದಕ್ಕೆ ಚಲಾಯಿಸುವುದರೊಂದಿಗೆ ಪೊಲೀಸ್ ಕಾನ್ಸ್ಟೇಬಲ್ ಬಲ ಕಾಲಿನ ಮಂಡಿಗೆ ಗಾಯಗೊಳಿಸಿ ಪರಾರಿಯಾಗಿದ್ದ.
ಈ ಕುರಿತು ದೂರು ಸ್ವೀಕರಿಸಿದ ಮಡಿಕೇರಿ ನಗರ ಪೊಲೀಸ್ ಠಾಣೆ ಪೊಲೀಸರು, ಡಿವೈಎಸ್ಪಿ ಮಹೇಶ್ ಕುಮಾರ್, ಇನ್ಸ್‌ಪೆಕ್ಟರ್ ಪಿ.ಕೆ.ರಾಜು, ಪಿಸ್ಐ ಲೋಕೇಶ್ ಹಾಗೂ ಸಿಬ್ಬಂದಿಗಳ ತಂಡದೊಂದಿಗೆ ಬಂಟ್ವಾಳಕ್ಕೆ ತೆರಳಿ ಆರೋಪಿ ನಝೀರ್’ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಈ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರು, ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅತೀ ವೇಗ ಹಾಗೂ ಅಜಾಗರುಕತೆಯಿಂದ ವಾಹನ ಚಲಾಯಿಸುವುದು ಅಥವಾ ಬೈಕ್/ಕಾರುಗಳನ್ನು ಚಲಾಯಿಸುತ್ತಾ ಯಾವುದೇ ರೀತಿಯ ಸ್ಟಂಟ್‌ಗಳನ್ನು ಮಾಡಿರುವ ಭಾವಚಿತ್ರ/ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಗ್ಗೆ ಮಾಹಿತಿ ನೀಡಬೇಕು. ಮತ್ತು ಸಂಚಾರ ನಿಯಂತ್ರಣ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಸಹನೆಯಿಂದ ವರ್ತಿಸಬೇಕು ಎಂದು ಕೋರಿದ್ದಾರೆ.
ರಸ್ತೆಯಲ್ಲಿ ಯಾವುದೇ ಅಪಘಾತಗಳು ಸಂಭವಿಸಿದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಅಥವಾ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.