ಹೊಸದಿಗಂತ ವರದಿ, ಅಂಕೋಲಾ:
ಇನೋವಾ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತ ಪಟ್ಟು ನಾಲ್ಕು ಜನರು ಗಾಯಗೊಂಡ ಘಟನೆ ತಾಲೂಕಿನ ಸರಳೇಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದೆ.
ತೆಲಂಗಾಣದ ಹೈದರಾಬಾದ್ ತಿರುಮಲಗಿರಿ ನಿವಾಸಿ ರೋಹಿತ್ ಬುದ್ದ ಜ್ಞಾನೇಶ್ವರ ಯಾದವ (33) ಮೃತ ವ್ಯಕ್ತಿಯಾಗಿದ್ದು ಗಂಭೀರವಾಗಿ ಗಾಯಗೊಂಡ ಆಂಧ್ರಪ್ರದೇಶ ಹೈದರಾಬಾದ್ ನಿವಾಸಿ ಉಪೇಂದ್ರ ರಾಘವ ರೆಡ್ಡಿ ಎಂಬಾತನಿಗೆ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಚಾಲಕ ನೆಲಮ್ ಕೌಶಿಕ್ ಮೂರ್ತಿ ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಳ್ಳಾರಿ ಸಾಯಿಪ್ರಸಾದ್ ಎನ್ನುವವರಿಗೆ ದೇಹದ ಒಳಭಾಗಗಳಿಗೆ ಪೆಟ್ಟು ಆಗಿದ್ದು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೈದರಾಬಾದ್ ನಿಂದ ಗೋವಾ, ಗೋಕರ್ಣ ಮೊದಲಾದ ಪ್ರದೇಶಗಳಿಗೆ ಇನೋವಾ ವಾಹನದಲ್ಲಿ ಪ್ರವಾಸಕ್ಕೆ ಹೊರಟ ಸಂದರ್ಭದಲ್ಲಿ ಅಂಕೋಲಾ ಸರಳೇಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ
ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡು ತಲೆಗೆ ಪೆಟ್ಟು ಬಿದ್ದ ರೋಹಿತ್ ಯಾದವನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಸಂಚಾರಿ ಪಿ.ಎಸ್. ಐ ಸುನೀಲ ಹುಲ್ಗೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳೀಯರು ಮತ್ತು ಆರ್. ಎಸ್. ಎಸ್ ಸ್ವಯಂ ಸೇವಕರು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.