September 20, 2026
Sunday, September 20, 2026
spot_img

ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು: ದಾಂಡೇಲಿಯಲ್ಲಿ ಕೆಪಿಸಿ ಉದ್ಯೋಗಿ ದುರ್ಮ*ರಣ

ಹೊಸದಿಗಂತ ವರದಿ ದಾಂಡೇಲಿ:

ಗಣೇಶಗುಡಿಯಿಂದ ದಾಂಡೇಲಿಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಕೆಪಿಸಿ ಉದ್ಯೋಗಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಸೋಮವಾರ ನಡೆದಿದೆ.

ಮೃತಪಟ್ಟವರನ್ನು ಗಣೇಶಗುಡಿ ಕೆಪಿಸಿ ಘಟಕದ ಉದ್ಯೋಗಿ ಮಲ್ಲಿಕಾರ್ಜುನ ರಾವ್ (40) ಎಂದು ಗುರುತಿಸಲಾಗಿದೆ. ದಾಂಡೇಲಿಯಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿರುವ ಪತ್ನಿಯನ್ನು ಕರೆದುಕೊಂಡು ಬರಲು ಮಲ್ಲಿಕಾರ್ಜುನ ರಾವ್ ಅವರು ಗಣೇಶಗುಡಿಯಿಂದ ದಾಂಡೇಲಿಗೆ ಬರುತ್ತಿದ್ದರು. ಉಸೋಡಾ ಸಮೀಪ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿದೆ.

ಇದನ್ನೂ ಓದಿ:

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕೆಪಿಸಿ ಸಿಬ್ಬಂದಿಗಳು ಗಾಯಗೊಂಡ ಮಲ್ಲಿಕಾರ್ಜುನ ರಾವ್ ಅವರನ್ನು ಕಾರಿನಿಂದ ಹೊರತೆಗೆದು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರು. ವೈದ್ಯರು ಪರೀಕ್ಷಿಸಿ ಅವರು ಈಗಾಗಲೇ ಮೃತಪಟ್ಟಿರುವುದನ್ನು ದೃಢಪಡಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

ಘಟನೆ ತಿಳಿದು ಆಸ್ಪತ್ರೆಗೆ ಕೆಪಿಸಿ ಅಧಿಕಾರಿಗಳು, ಸಿಬ್ಬಂದಿಗಳು, ವಕೀಲರು, ಅವೇಡಾ ಗ್ರಾ.ಪಂ ಮಾಜಿ ಅಧ್ಯಕ್ಷ ಅರುಣ್ ಭಗವತಿರಾಜ್, ಮಾಜಿ ಗ್ರಾ.ಪಂ ಸದಸ್ಯರು ಹಾಗೂ ಗಣೇಶಗುಡಿ ಮತ್ತು ದಾಂಡೇಲಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂತಾಪ ಸೂಚಿಸಿದರು.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !