July 8, 2026
Wednesday, July 8, 2026
spot_img

ಕರಾಚಿ ಕರಾವಳಿಯಲ್ಲಿ ಕಾರ್ಗೋ ವಿಮಾನ ನಿಗೂಢ ನಾಪತ್ತೆ: ಅರಬ್ಬಿ ಸಮುದ್ರದಲ್ಲಿ ತೀವ್ರ ಶೋಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರ್ಜಾದಿಂದ ಟೇಕಾಫ್ ಆಗಿದ್ದ ಐವರು ಸಿಬ್ಬಂದಿಯನ್ನು ಒಳಗೊಂಡ ಬೋಯಿಂಗ್ 737 ಸರಕು ಸಾಗಣೆ (ಕಾರ್ಗೋ) ವಿಮಾನವೊಂದು ಪಾಕಿಸ್ತಾನದ ಕರಾಚಿ ಕರಾವಳಿಯ ಅರಬ್ಬಿ ಸಮುದ್ರದ ಬಳಿ ನಿಗೂಢವಾಗಿ ನಾಪತ್ತೆಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಯಶಸ್ವಿಯಾಗಿ ಹಾರಾಟ ನಡೆಸಿದ್ದ ಈ ವಿಮಾನವು, ಕರಾಚಿ ಸಮೀಪಿಸುತ್ತಿದ್ದಂತೆ ದಿಢೀರನೆ ರೇಡಾರ್ ಸಂಪರ್ಕದಿಂದ ಕಡಿತಗೊಂಡಿದೆ.

ಎಟಿಸಿಗೆ ಸಿಗದ ತುರ್ತು ಸಂದೇಶ

ಮಂಗಳವಾರ ರಾತ್ರಿ ಸ್ಥಳೀಯ ಸಮಯ 9:18 ರ ಸುಮಾರಿಗೆ ವಿಮಾನದ ನ್ಯಾವಿಗೇಷನ್ ವ್ಯವಸ್ಥೆಯಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಈ ವೇಳೆ ಕರಾಚಿ ಏರಿಯಾ ಕಂಟ್ರೋಲ್ ಸೆಂಟರ್‌ನಿಂದ ಮಾರ್ಗದರ್ಶನವನ್ನೂ ಪಡೆಯಲಾಗಿತ್ತು. ಆದರೆ, ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುವ ಮುನ್ನ ವಿಮಾನದ ಪೈಲಟ್‌ಗಳು ಏರ್ ಟ್ರಾಫಿಕ್ ಕಂಟ್ರೋಲ್‌ಗೆ (ATC) ಯಾವುದೇ ರೀತಿಯ ತುರ್ತು ಅಪಾಯದ ಮುನ್ಸೂಚನೆ ಅಥವಾ ‘ಮೇಡೇ’ (Mayday) ಸಂದೇಶವನ್ನು ರವಾನಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರತಿಕೂಲ ಹವಾಮಾನ ಅಥವಾ ತಾಂತ್ರಿಕ ವೈಫಲ್ಯವೇ ಇದಕ್ಕೆ ಪ್ರಮುಖ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಮುಂದುವರಿದ ಜಂಟಿ ಶೋಧ

ವಿಮಾನವು ಸಮುದ್ರಕ್ಕೆ ಪತನಗೊಂಡಿರುವ ಸಾಧ್ಯತೆಯಿದ್ದು, ಪಾಕಿಸ್ತಾನದ ರಕ್ಷಣಾ ಸಂಸ್ಥೆಗಳು, ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳು ಜಂಟಿಯಾಗಿ ಹೆಲಿಕಾಪ್ಟರ್‌ಗಳ ಮೂಲಕ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿವೆ. ಪ್ರಸ್ತುತ ಸಮುದ್ರದಲ್ಲಿ ಭಾರಿ ಗಾಳಿ ಮತ್ತು ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !