ಹೊಸದಿಗಂತ ವರದಿ,ಹಾಸನ:
ಚುನಾವಣೆ ಪ್ರಚಾರ ರ‍್ಯಾಲಿಯಲ್ಲಿ ಗಣ್ಯರಿಗೆ ಕ್ರೇನ್ ಮೂಲಕ ಹೂವಿನ ಹಾರ ಹಾಕಲು ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರವಾರ ಏಜೆಂಟರ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಖಲಾಗಿವೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಏ.೧ ರಂದು ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಬೃಹತ್ ರ‍್ಯಾಲಿ ಅಂತ್ಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸೇಬುಗಳಿದ್ದ ಬೃಹತ್ ಮಾಲೆ ಸಮರ್ಪಿಸಲು ಎರಡು ಕ್ರೇನ್‌ಗಳನ್ನು ಬಳಕೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ಪಕ್ಷದ ಪ್ರಚಾರ ಏಜೆಂಟ್ ಮುಜಾಹಿದ್ ಪಾಷ ವಿರುದ್ಧ ಫ್ಲೈಯಿಂಗ್ ಸ್ಕ್ವಾಡ್‌ನವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಅಂತೆಯೇ ಎನ್‌ಡಿಎ ಮೈತ್ರಿ ಕುಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಏ.೪ ರಂದು ನಾಮಪತ್ರ ಸಲ್ಲಿಕೆ ನಂತರ ಆಯೋಜಿಸಿದ್ದ ಬೃಹತ್ ರ‍್ಯಾಲಿಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ನಗರದ ಜಿಲ್ಲಾ ಕ್ರೀಡಾಂಗಣದ ಎದುರು ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಅರ್ಪಿಸಲಾಗಿತ್ತು. ಕ್ರೇನ್ ಮೂಲಕ ಹೂವಿನ ಹಾರ ಹಾಕಲು ಅನುಮತಿ ಪಡೆಯದ ಹಿನ್ನಲೆ ಜೆಡಿಎಸ್ ಏಜೆಂಟ್ ಎ.ಶ್ರೀಧರ್ ವಿರುದ್ಧವೂ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.