ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಪತ್ನಿ ಹಾಗೂ ಅತ್ತೆಯ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಒಂಬತ್ತು ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಈ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಶ್ರೀಕಾಂತ್ ಎಂಬುವರು ತನ್ನ ಪತ್ನಿ ಲಕ್ಷ್ಮೀ ಮತ್ತು ಅತ್ತೆ ಮೇಲೆ ರಾಡ್ನಿಂದ ಹಲ್ಲೆ ಮಾಡಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ಲಕ್ಷೀ ಅವರ ಸಹೋದರ ರವಿಕಿರಣ್ ಹಾಗೂ ಇತರೆ ಕುಟುಂಬ ಸದಸ್ಯರೂ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಸಹೋದರಿ ಲಕ್ಷ್ಮೀ 15 ವರ್ಷಗಳ ಹಿಂದೆ ಪಾಲಹಳ್ಳಿಯ ಶ್ರೀಕಾಂತ್ ಎಂಬುವವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಕೆಲ ವರ್ಷಗಳ ಬಳಿಕ ಶ್ರೀಕಾಂತ್, ಅವರ ಇಬ್ಬರು ಪುತ್ರರು, ತಾಯಿ ಕೃಷ್ಣವೇಣಿ ಮತ್ತು ಹಿರಿಯ ಸಹೋದರರಾದ ಹರೀಶ್ ಮತ್ತು ಪ್ರಶಾಂತ್ ಅವರೊಂದಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಇದೀಗ ಶ್ರೀಕಾಂತ್ ಜಾನ್ ಎಂದು ಹೆಸರು ಬದಲಿಸಿಕೊಂಡಿದ್ದು, ಅವರ ತಾಯಿ ಕೃಷ್ಣವೇಣಿ ಅವರನ್ನು ಮೇರಿ ಎಂದು ಕರೆಯಲಾಗುತ್ತಿದೆ.
ತಾವು ಮತಾಂತರಗೊಂಡ ಬಳಿಕ ಸಹೋದರಿಯನ್ನೂ ಮತಾಂತರಗೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ಈ ಒತ್ತಡ ಸಹಿಸಲಾಗದೆ ಸಹೋದರಿ ಆತ್ಮಹತ್ಯೆಗೂ ಯತ್ನಿಸಿದ್ದಳು. ನಂತರ ಕೆಆರ್ಎಸ್ ಜಲಾಶಯದ ಬಳಿ ಪತ್ತೆಯಾಗಿದ್ದಳು. ಈ ಸಂಬಂಧ ಪಾಂಡವಪುರ ಪೊಲೀಸರಿಗೆ ಈ ಹಿಂದೆ ದೂರು ದಾಖಲಾಗಿತ್ತು.
ಈ ನಡುವೆ ಶ್ರೀಕಾತ್ ಕುಟುಂಬಸ್ಥರು ಸಹೋದರಿ, ತಾಯಿ ಹಾಗೂ ನನ್ನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದು, ತಲೆಗೆ ಗಾಯಗಳಾಗಿವೆ. ಶ್ರೀರಂಗಪಟ್ಟಣದ ಆಸ್ಪತ್ರೆಯಲ್ಲಿ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.