ಹೊಸದಿಗಂತ ವರದಿ, ಮಡಿಕೇರಿ:
ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿ.ಇ.ಟಿ ವಿದ್ಯಾರ್ಥಿಗಳ ಜನಿವಾರ ತೆಗೆದು ಪರೀಕ್ಷಾ ಕೊಠಡಿಗೆ ಬರ ಹೇಳಿ ಮಾನಸಿಕ ಹಿಂಸೆ ನೀಡಿದ ಘಟನೆಯನ್ನು ಖಂಡಿಸಿ ಶನಿವಾರ ಕುಶಾಲನಗರ ಮತ್ತು ಸೋಮವಾರಪೇಟೆಯಲ್ಲಿ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ ನಡೆಯಿತು.
ಬೀದರ್ ಹಾಗೂ ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದ ಸಮಾಜದ ಪ್ರತಿನಿಧಿಗಳು, ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿದರು.
ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಕುಶಾಲನಗರ ವ್ಯಾಪ್ತಿಯ ಬ್ರಾಹ್ಮಣ ಸಮಾಜದ ಬಂಧುಗಳು ಮೆರವಣಿಗೆಯಲ್ಲಿ ತಹಶೀಲ್ದಾರ್ ಕಚೇರಿವರೆಗೆ ತೆರಳಿ ಮನವಿ ಸಲ್ಲಿಸಿದರು.
ಕುಶಾಲನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ನಾಗೇಂದ್ರ ಬಾಬು ಪದಾಧಿಕಾರಿಗಳು, ಸಮಾಜ ಬಾಂಧವರು ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಮೆರವಣಿಗೆಯಲ್ಲಿ ಸಾಗಿದರು.
ಸೋ.ಪೇಟೆಯಲ್ಲಿ ಪ್ರತಿಭಟನೆ: ತಮ್ಮ ಜನಾಂಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸೋಮವಾರಪೇಟೆ ಬ್ರಾಹ್ಮಣ ಸಮಾಜದ ಪ್ರಮುಖರು ಪ್ರತಿಭಟನೆ ನಡೆಸಿದರು.
ಬ್ರಾಹ್ಮಣ ಸಮುದಾಯದ ಮೇಲೆ ಹಿಂದೆಯೂ ಹಲವು ಬಾರಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೇಜೋವಧೆ ನಡೆದಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸೋಮವಾರಪೇಟೆ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ. ಆರ್.ನಂದ ಕುಮಾರ್ ಹೇಳಿದರು.
ಪರೀಕ್ಷಾರ್ಥಿಗೆ ಪರೀಕ್ಷೆಗೆ ತಡೆಯೊಡ್ಡಿರುವುದು, ಜನಿವಾರ ತುಂಡರಿಸಿರುವುದು ಖಂಡನೀಯ ಹಾಗೂ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಈ ಕೃತ್ಯಕ್ಕೆ ಸರ್ಕಾರವೇ ನೇರ ಹೊಣೆಯಾಗಿದ್ದು, ವಿದ್ಯಾರ್ಥಿಗೆ ನ್ಯಾಯ ಸಿಗಬೇಕಾಗಿದೆ ಎಂದು ಖಂಡನಾ ಪತ್ರವನ್ನು ತಾಲೂಕು ದಂಡಾಧಿಕಾರಿಗಳಾದ ಕೆ.ಕೆ. ಕೃಷ್ಣಮೂರ್ತಿಯವರ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸಲಾಯಿತು.
ಸಮಾಜದ ಕಾರ್ಯದರ್ಶಿ ಎಂ. ಶ್ರೀಕಾಂತ್, ಎಸ್. ಎನ್. ಸೋಮಶೇಖರ್, ಮಂಜುನಾಥ್ ಪ್ರಸಾದ್, ಎಸ್. ಎ. ಆನಂದ್, ಎಸ್. ಆರ್. ಸೋಮೇಶ್, ಜಿ. ಉಮೇಶ್, ಗಾಯತ್ರಿ ಅಣ್ಣಯ್ಯ, ಲಕ್ಷ್ಮಿ ಶ್ರೀನಿವಾಸ್, ಸುಮಾ ಆನಂದ್, ಯಡೂರ್ ಹರೀಶ್, ಎಸ್. ಆರ್. ಶ್ರೀನಿವಾಸ್, ಎಸ್. ಡಿ. ವಿಜೇತ್, ಎಸ್ ಎನ್. ಶ್ಯಾಮಸುಂದರ್, ವಿದ್ಯಾ ಸೋಮೇಶ್ ಇನ್ನಿತರರು ಪಾಲ್ಗೊಂಡಿದ್ದರು.
ಬ್ರಾಹ್ಮಣ ಅರ್ಚಕರ ಸಂಘದಿಂದ ಖಂಡನೆ: ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿ.ಇ.ಟಿ ವಿದ್ಯಾರ್ಥಿಗಳ ಜನಿವಾರ ತೆಗೆದು ಪರೀಕ್ಷಾ ಕೊಠಡಿಗೆ ಬರ ಹೇಳಿ ಮಾನಸಿಕ ಹಿಂಸೆ ನೀಡಿದ ಪ್ರಕರಣವನ್ನು ಕೊಡಗು ಜಿಲ್ಲಾ ಬ್ರಾಹ್ಮಣ ಅರ್ಚಕರ ಸಂಘ ತೀವ್ರವಾಗಿ ಖಂಡಿಸಿದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಸರಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಬ್ರಾಹ್ಮಣ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದೆ.